ಬೆಂಗಳೂರು:ಕಾನೂನಿಗೆ ತಿದ್ದುಪಡಿ ತಂದು ಗಲಭೆ ನಡೆಸಿದವರ ಆಸ್ತಿ ಮುಟ್ಟುಗೋಲು ಹಾಕುವ ಮೂಲಕ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಾದ ಸಾರ್ವಜನಿಕ ಆಸ್ತಿ -ಪಾಸ್ತಿ ನಷ್ಟ ಭರಿಸುವ ಕುರಿತು ಚಿಂತನೆ ನಡೆದಿದೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಗಲಭೆಕೋರರ ಆಸ್ತಿ ಮುಟ್ಟುಗೋಲಿಗೆ ಚಿಂತನೆ: ಡಿಸಿಎಂ ಅಶ್ವತ್ಥ್ ನಾರಾಯಣ - ಬೆಂಗಳೂರು ಡಿ.ಜೆ ಹಳ್ಳಿ ಗಲಭೆ
ಡಿ.ಜೆ ಹಳ್ಳಿ ಮತ್ತು ಕೆ.ಜಿ. ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಭಾಗಿಯಾದವರ ಆಸ್ತಿ ಮುಟ್ಟುಗೋಲು ಹಾಕಿ ನಷ್ಟ ಭರಿಸುವ ಕುರಿತು ಚಿಂತನೆ ನಡೆದಿದೆ ಎಂದು ಡಿಸಿಎಂ ಆಶ್ವತ್ಥ್ ನಾರಾಯಣ ಹೇಳಿದ್ದಾರೆ.
ಗಲಭೆ ಪ್ರಕರಣದ ಕುರಿತು ಮಾತನಾಡಿ, ಸದ್ಯ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮುಂದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಮಾಜಘಾತುಕರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವ ಕೆಲಸ ತ್ವರಿತವಾಗಿ ನಡೆಯುತ್ತಿದೆ. ಗಲಭೆಗೆ ಕಾರಣಕರ್ತರಾದವರನ್ನು ಹುಡುಕಿ ಕ್ರಮ ಕೈಗೊಳ್ಳುತ್ತೇವೆ. ಜಿಹಾದಿ ಸಂಪರ್ಕ ಇರುವಂತವರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಗೃಹ ಇಲಾಖೆ ಕ್ರಮಕೈಗೊಳ್ಳಲಿದೆ ಎಂದರು.
ರಾಜ್ಯದಲ್ಲಿ ಶಾಂತಿ-ಸೌಹಾರ್ದತೆ, ನೆಮ್ಮದಿ ನೆಲೆಸುವಂತೆ ಮಾಡಲು ಸರ್ಕಾರ ಕೆಲಸ ಮಾಡಲಿದೆ. ಈ ಹಿಂದೆ ನಡೆದಿರುವ ಎಲ್ಲಾ ಘಟನೆಗಳನ್ನು ಆಧರಿಸಿ ಸಂಬಂಧಪಟ್ಟ ಸಂಘಟನೆಗಳನ್ನು ನಿಷೇಧಿಸಬೇಕೆಂಬ ಒತ್ತಾಯವಿದೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.