ಕರ್ನಾಟಕ

karnataka

By

Published : Apr 26, 2022, 10:41 PM IST

ETV Bharat / state

'ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ' ಕಾರ್ಯಕ್ರಮದಡಿ 11,885 ಅರ್ಜಿಗಳು ಇತ್ಯರ್ಥಕ್ಕೆ ಬಾಕಿ!

ಜಿಲ್ಲಾಡಳಿತವನ್ನು ಹಳ್ಳಿ ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಕಳೆದ ಫೆಬ್ರವರಿ ತಿಂಗಳ ಮೂರನೇ ಶನಿವಾರ ಚಾಲನೆ ದೊರಕಿತ್ತು. ಈವರೆಗೆ ಐದು ಬಾರಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಹೋಗಿದೆ.

ಆರ್ . ಅಶೋಕ್
ಆರ್ . ಅಶೋಕ್

ಬೆಂಗಳೂರು: ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ. ಕಂದಾಯ ಇಲಾಖೆ ಜಾರಿಗೊಳಿಸಿರುವ ವಿನೂತನ ಕಾರ್ಯಕ್ರಮ. ಜಿಲ್ಲಾಧಿಕಾರಿಗಳು ಜಿಲ್ಲೆಯ ಹಳ್ಳಿಗಳಿಗೆ ಹೋಗಿ ಸಮಸ್ಯೆಯನ್ನು ಸ್ಥಳದಲ್ಲೇ ಪರಿಹರಿಸುವ ಕಾರ್ಯಕ್ರಮ ಇದಾಗಿದೆ. ಹೀಗೆ ಜಿಲ್ಲಾಧಿಕಾರಿಗಳು ಹಳ್ಳಿಗಳ‌ ಕಡೆಗೆ ನಡೆದು ಇತ್ಯರ್ಥ ಪಡಿಸಿದ ಅಹವಾಲು, ಬಾಕಿ ಉಳಿಸಿಕೊಂಡ ಅರ್ಜಿಗಳೆಷ್ಟು ಎಂಬ ವರದಿ ಇಲ್ಲಿದೆ.

11,885 ಅರ್ಜಿಗಳು ಇತ್ಯರ್ಥಕ್ಕೆ ಬಾಕಿ

ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ‌ ಕಡೆ ಎಂಬ ವಿನೂತನ ಕಾರ್ಯಕ್ರಮವನ್ನು ಕಂದಾಯ ಇಲಾಖೆ ಕಳೆದ ಫೆಬ್ರವರಿಯಲ್ಲಿ ಪ್ರಾರಂಭಿಸಿತ್ತು. ಜಿಲ್ಲಾಡಳಿತವನ್ನು ಹಳ್ಳಿ ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಕಳೆದ ಫೆಬ್ರವರಿ ತಿಂಗಳ ಮೂರನೇ ಶನಿವಾರ ಚಾಲನೆ ದೊರಕಿತ್ತು. ಈವರೆಗೆ ಐದು ಬಾರಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಹೋಗಿದೆ. ಹಳ್ಳಿಯ ಜನರು ಸಣ್ಣಪುಟ್ಟ ಸಮಸ್ಯೆ ಇದ್ದರೂ ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಕಂದಾಯ ಇಲಾಖೆ ಈ ಕಾರ್ಯಕ್ರಮ ರೂಪಿಸಿದೆ.

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಡಿಸಿಗಳು ಪ್ರತಿ ತಿಂಗಳ ಮೂರನೇ ಶನಿವಾರ ಒಂದು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿನ ಹಳ್ಳಿಯ ಜನರ ಅಹವಾಲು ಸ್ವೀಕರಿಸಿ ಸಮಸ್ಯೆ ಇತ್ಯರ್ಥ ಪಡಿಸಬೇಕು. ಪಿಂಚಣಿ, ಆಶ್ರಯ ಯೋಜನೆ, ಸ್ಮಶಾನ, ಫೌತಿ ಖಾತೆ, ಪಹಣಿ ತಿದ್ದುಪಡಿ, ಭೂ ಒತ್ತುವರಿ ತೆರವು, ಮತದಾರರ ಪಟ್ಟಿ ಪರಿಷ್ಕರಣೆ, ಬರ, ಪ್ರವಾಹ ಪರಿಶೀಲನೆ ಹಾಗೂ ಪರಿಹಾರ ನೀಡುವುದು, ಅರ್ಹ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌ ಹಂಚಿಕೆ, ಪೋಡಿ ಪ್ರಕರಣ ಇತ್ಯರ್ಥ, ಕಂದಾಯ ಗ್ರಾಮಗಳ ರಚನೆಗೆ ಸಂಬಂಧಿಸಿದ ಅಡೆತಡೆ ನಿವಾರಣೆ ಸಂಬಂಧ ಡಿಸಿಗಳ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.

ಕಂದಾಯ ಸಚಿವ ಆರ್.ಅಶೋಕ್ ಗ್ರಾಮಗಳಿಗೆ ತೆರಳಿ ಗ್ರಾಮ ವಾಸ್ತವ್ಯ ಮಾಡಿ, ಅರ್ಜಿಗಳ ವಿಲೇವಾರಿ ಮಾಡುತ್ತಿದ್ದಾರೆ. ಕೋವಿಡ್ ಹಿನ್ನೆಲೆ ಈ ಕಾರ್ಯಕ್ರಮಕ್ಕೆ ಸ್ವಲ್ಪ ಬ್ರೇಕ್ ಬಿದ್ದಿತ್ತು. ಬಳಿಕ ಮತ್ತೆ ಕಾರ್ಯಕ್ರಮ ಪುನರಾರಂಭಗೊಂಡಿತು. ಈವರೆಗೆ ಐದು ಬಾರಿ ಈ ಕಾರ್ಯಕ್ರಮ ನಡೆದಿದೆ.

ಇತ್ಯರ್ಥವಾಗದೇ ಉಳಿದ 11,885 ಅರ್ಜಿಗಳು: ಇನ್ನು ಜಿಲ್ಲಾಧಿಕಾರಿಗಳು ಹಳ್ಳಿ ಕಡೆಗೆ ನಡೆಯಿರಿ ಕಾರ್ಯಕ್ರಮದಲ್ಲಿ ಇತ್ಯರ್ಥವಾಗದ ಪ್ರಕರಣಗಳ ಸಂಖ್ಯೆಯೂ ಸಾಕಷ್ಟಿದೆ. ಈವರೆಗೆ ಐದು ಬಾರಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ‌ ಕಡೆ ಕಾರ್ಯಕ್ರಮದಲ್ಲಿ ಸುಮಾರು 11,885 ಅರ್ಜಿಗಳು ಇತ್ಯರ್ಥವಾಗದೇ ಉಳಿದಿದೆ. ಕಂದಾಯ ಇಲಾಖೆ ನೀಡಿದ ಮಾಹಿತಿ ಪ್ರಕಾರ ಜಿಲ್ಲಾಧಿಕಾರಿಗಳ ವ್ಯಾಪ್ತಿಯಲ್ಲಿ 3,763 ಅರ್ಜಿ ವಿಲೇವಾರಿಯಾಗದೇ ಹಾಗೇ ಉಳಿದಿದೆ.

ಕಾರ್ಯಕ್ರಮದಡಿ ಸ್ವೀಕರಿಸಲಾದ ಅರ್ಜಿಗಳ ಪೈಕಿ ಉಪವಿಭಾಗಾಧಿಕಾರಿ ವ್ಯಾಪ್ತಿಯಲ್ಲಿ 1,125 ಅರ್ಜಿಗಳು ಇತ್ಯರ್ಥವಾಗದೇ ಬಾಕಿ ಉಳಿದುಕೊಂಡಿದೆ. ಇನ್ನು ತಹಾಶೀಲ್ದಾರ್ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅರ್ಜಿಗಳು ಇತ್ಯರ್ಥವಾಗದೇ ಬಾಕಿ ಉಳಿದುಕೊಂಡಿದೆ. ಸುಮಾರು 6,997 ಅರ್ಜಿಗಳು ವಿಲೇವಾರಿಯಾಗದೇ ಬಾಕಿ ಉಳಿದುಕೊಂಡಿದೆ. ಬಾಕಿ ಇರುವ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ವರ್ಗಾಯಿಸಲಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು ಇತ್ಯರ್ಥ ಪಡಿಸಿರುವ ಪ್ರಕರಣ ಎಷ್ಟು?: ಅರ್ಜಿ ವಿಲೇವಾರಿಯನ್ನು ಗಮನಿಸಿದರೆ ಈ‌‌ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಯಶಸ್ವಿ ಯೋಜನೆಯಾಗಿ ಹೊರ ಹೊಮ್ಮಿದೆ. ಜಿಲ್ಲಾಧಿಕಾರಿಗಳು ಹಳ್ಳಿ ಕಡೆಗೆ ಹೋಗಿ ಗ್ರಾಮಸ್ಥರ ಅಹವಾಲು ಸ್ವೀಕರಿಸುವ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈವರೆಗೆ 30 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮದ ಮೂಲಕ ಒಟ್ಟು 99,179 ಅರ್ಜಿಗಳನ್ನು ಸ್ವೀಕರಿಸಲಾಗಿದೆ.

ಈ ಕಾರ್ಯಕ್ರಮದಡಿ ಸ್ವೀಕರಿಸಲಾದ ಒಟ್ಟು ಅರ್ಜಿ ಪೈಕಿ ಸ್ಥಳದಲ್ಲೇ ಒಟ್ಟು 87,387 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ. ಜಿಲ್ಲಾಧಿಕಾರಿಗಳ ವ್ಯಾಪ್ತಿಯಲ್ಲಿ 26,483 ಅರ್ಜಿ ಸ್ವೀಕರಿಸಲಾಗಿದೆ. 22,820 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಉಪವಿಭಾಗಧಿಕಾರಿ ವ್ಯಾಪ್ತಿಯಲ್ಲಿ 8,903 ಅರ್ಜಿಗಳು ಸ್ವೀಕರಿಸಲಾಗಿದ್ದು, 7,778 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ತಹಶೀಲ್ದಾರ್ ವ್ಯಾಪ್ತಿಯಲ್ಲಿ 63,793 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ 56,789 ಅರ್ಜಿಗಳನ್ನು ಇತ್ಯರ್ಥ ‌ಪಡಿಸಲಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.

ಓದಿ:ಆಹಾರ ಸುರಕ್ಷಾ ಕಾಯ್ದೆ ಪರಿಣಾಮಕಾರಿ ಜಾರಿಗೆ ಹೈಕೋರ್ಟ್ ಆದೇಶ

For All Latest Updates

ABOUT THE AUTHOR

...view details