ಬೆಂಗಳೂರು:ಹೊಸದಾಗಿ ಆಡಳಿತಕ್ಕೆ ಬಂದ ಬಿಜೆಪಿ ಸರಕಾರ ಸಚಿವ ಸಂಪುಟ ವಿಸ್ತರಣೆ ಇದುವರೆಗೂ ಮಾಡದೇ ಇರುವುದರಿಂದ ಈ ಸ್ವತಂತ್ರ್ಯೋತ್ಸವವು ರಾಜ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಲಿದೆ.
ಆಗಸ್ಟ್ 15 ರಂದು ಜಿಲ್ಲಾ ಕೇಂದ್ರಗಳಲ್ಲಿ ಈ ಬಾರಿ ಜಿಲ್ಲಾಧಿಕಾರಿಗಳೇ ರಾಷ್ಟ್ರ ದ್ವಜಾರೋಹಣ ಮಾಡಲಿದ್ದಾರೆ.
ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದ್ದಾಗ ಮತ್ತು ಸಚಿವರ ಅನುಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡುವುದು ಸಹಜ. ಆದರೆ ರಾಜ್ಯದಲ್ಲಿ ಬಹುಮತದ ಚುನಾಯಿತ ಸರಕಾರ ಆಡಳಿತದಲ್ಲಿದ್ದರೂ, ಮುಖ್ಯಮಂತ್ರಿಗಳಿದ್ದರೂ ಸಚಿವ ಸಂಪುಟ ವಿಸ್ತರಣೆ ವಿಳಂಬವಾದ ಕಾರಣ ಜಿಲ್ಲಾ ಉಸ್ತುವಾರಿ ಸಚಿವರಿಲ್ಲದೇ ಜಿಲ್ಲಾಧಿಕಾರಿಗಳೇ ಜಿಲ್ಲಾ ಕೇಂದ್ರಗಳಲ್ಲಿ ರಾಷ್ಟ್ರ ಧ್ವಜ ಹಾರಿಸುತ್ತಿರುವುದು ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲು.
ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಸಚಿವ ಸಂಪುಟ ಇಲ್ಲದ ಸ್ವತಂತ್ರ್ಯೋತ್ಸವ ಜಿಲ್ಲಾ ಉಸ್ತುವಾರಿ ಸಚಿವರಿಲ್ಲದೆ ಅವರ ಅನುಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡುತ್ತಿರುವುದು ವಿಶೇಷ ಸನ್ನಿವೇಶ ಆಗಿದೆ. ರಾಜ್ಯದಲ್ಲಿ ಯಾವುದೇ ಪಕ್ಷದ ಸರಕಾರವಿದ್ದರೂ ಕನಿಷ್ಠ ಪಕ್ಷ 20 ಸಚಿವರಾದರೂ ಇರುತ್ತಾರೆ. ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಹೊರತುಪಡಿಸಿ ಯಾವೊಬ್ಬ ಸಚಿವರಿರದಿರುವುದು ಅಪರೂಪದಲ್ಲಿ ಅಪರೂಪದ ಪ್ರಸಂಗವಾಗಿದೆ.
ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡಿದ್ದರ ಇತಿಹಾಸ
ರಾಜ್ಯದಲ್ಲಿ ಬಹುಮತ ಸರಕಾರದ ಅನುಪಸ್ಥಿತಿಯಲ್ಲಿ ರಾಷ್ಟಪತಿ ಆಡಳಿತ ಜಾರಿಯಲ್ಲಿದ್ದ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವ ಹಾಗು ಗಣರಾಜ್ಯೋತ್ಸವ ವೇಳೆ ಜಿಲ್ಲಾಧಿಕಾರಿಗಳು ಜಿಲ್ಲಾ ಕೇಂದ್ರ ದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದ ನಿದರ್ಶನಗಳಿವೆ.
- 2007ರ ನವೆಂಬರ್ 20 ರಿಂದ 2008 ರ ಮೇ 27 ರವರೆಗೆ ರಾಷ್ಟ್ರ ಪತಿ ಆಡಳಿತ ಜಾರಿಯಲ್ಲಿದ್ದಾಗ (ಬಿಜೆಪಿ ಸರಕಾರ ಕುಸಿದು ಬಿದ್ದಾಗ) ಜನವರಿ 26 ರಂದು ಗಣರಾಜ್ಯೋತ್ಸವ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಿಲ್ಲದ್ದಕ್ಕೆ ಜಿಲ್ಲಾಧಿಕಾರಿಗಳು ಧ್ವಜಾರೂಹಣ ಮಾಡಿದ್ದರು.
- 1989 ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್ ಆರ್ ಬೊಮ್ಮಾಯಿ ಸರಕಾರ ಪತನಗೊಂಡು ರಾಷ್ಟಪತಿ ಆಳ್ವಿಕೆ ಜಾರಿಯಲ್ಲಿದ್ದಾಗ ( 21-4-1989 ರಿಂದ 30-11-1989 ) ಆಗಸ್ಟ್ 15 ರಂದು ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಂದ ಧ್ವಜಾರೋಹಣೆ
- 1977ರಲ್ಲಿ ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸರ ಸರಕಾರ ಪತನಗೊಂಡು ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದ್ದಾಗ ( 31-12-1977 ರಿಂದ 28-2-1978 ) ಗಣರಾಜ್ಯೋತ್ಸವ ವೇಳೆ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡಿದ್ದರು.
- 1971 ರಲ್ಲಿಯೂ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದ್ದರಿಂದ ಆಗಸ್ಟ್ 15 ರಂದು ಜಿಲ್ಲಾಧಿಕಾರಿಗಳೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ್ದರು.
ರಾಜ್ಯದಲ್ಲಿ ಒಟ್ಟು ಎರಡು ಸಂದರ್ಭಗಳಲ್ಲಿ ಮಾತ್ರ ಸಚಿವರ ಅನುಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆದಿದೆ. ಆಗ ರಾಷ್ಟಪತಿ ಆಡಳಿತ ಜಾರಿಯಲ್ಲಿದ್ದು ಬಹುಮತ ಸರಕಾರ ಅಸ್ಥಿತ್ವದಲ್ಲಿ ಇರಲಿಲ್ಲ. ಇದರಿಂದ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸಿದ್ದರು. ಆದರೆ ರಾಜ್ಯದಲ್ಲಿ ಬಹುಮತ ಸರಕಾರ ಅಧಿಕಾರದಲ್ಲಿದ್ದರೂ, ರಾಷ್ಟ್ರಪತಿ ಆಡಳಿತ ಜಾರಿಯಲ್ಲಿ ಇಲ್ಲದಿದ್ದರೂ, ಮುಖ್ಯಮಂತ್ರಿಗಳಿದ್ದರೂ ಸಚಿವರಿಲ್ಲದ ಸಂಪುಟದಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲು.
ರಾಜಧಾನಿಯಲ್ಲಿ ಸಿಎಂ ಧ್ವಜಾರೋಹಣ
ಜಿಲ್ಲೆಗಳಲ್ಲಿ ಧ್ವಜಾರೋಹಣಕ್ಕೆ ಸಚಿವರಿಲ್ಲದಿದ್ದರೂ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಆ.15 ರಂದು ಬೆಳಗ್ಗೆ ನಡೆಯುವ ಪ್ರಮುಖ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ರಾಜ್ಯವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.