ಬೆಂಗಳೂರು :ಆಡಳಿತ ಯಂತ್ರಕ್ಕೆ ಚುರುಕು ನೀಡುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು, ಸಿಇಒ, ಪ್ರಾದೇಶಿಕ ಆಯುಕ್ತರುಗಳ ಸಭೆ ನಡೆಸಲಾಗಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.
ವಿಧಾನಸೌಧದಲ್ಲಿ ಎರಡು ದಿನಗಳ ಸಮ್ಮೇಳನದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎರಡು ದಿನದ ಸಮ್ಮೇಳನದಲ್ಲಿ ಆಡಳಿತ ಚುರುಕುಗೊಳಿಸಲು ಹಾಗೂ ಬರಗಾಲ ಎದುರಿಸಲು, ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆಗೆ ಸಿದ್ಧತೆ ನಡೆಸಲು ಹಾಗೂ ಅತಿವೃಷ್ಟಿ ನಿರ್ವಹಣೆಗೆ ಅನುಕೂಲವಾಗುವಂತೆ ಸುದೀರ್ಘವಾಗಿ ಚರ್ಚಿಸಲಾಗಿದೆ ಎಂದರು.
ಸಭೆಯಲ್ಲಿ ನೀಡಿದ ಸಲಹೆ, ಸೂಚನೆಗಳು :
- ಕುಡಿವ ನೀರಿನ ಸಮಸ್ಯೆ ಹಾಗೂ ಅಂತರ್ಜಲ ಮಟ್ಟ ಏರಿಸುವುದು, ಜಲಸಂರಕ್ಷಣೆ ಮಾಡಲು ಜಾಗೃತಿ ಕಾರ್ಯಕ್ರಮ ಜಾರಿಗೆ ತರಬೇಕು.
- ಮಳೆ ನೀರು ಸಂಗ್ರಹಣೆಗೆ ಆದ್ಯತೆ, ಉದ್ಯೋಗ ಖಾತರಿ ಯೋಜನೆಯಡಿ ಇದಕ್ಕೆ ಉತ್ತೇಜನ ನೀಡಬೇಕು.
- ಕುಡಿವ ನೀರಿನ ಸಂಬಂಧ ಎಸ್‌ಡಿಆರ್‌ಎಫ್ ಮಾರ್ಗಸೂಚಿಯಲ್ಲಿನ ನಿಬಂಧನೆ ಸಡಿಲ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು.
- ಪ್ರತಿ ಜಿಲ್ಲೆಗೂ ಟ್ಯಾಂಕರ್‌ನಲ್ಲಿ ನೀರು ಒದಗಿಸುತ್ತಿದ್ದು, ಟ್ಯಾಂಕರ್‌ಗಳಿಗೆ ಬಿಲ್ ನೀಡಿಲ್ಲ ಎಂಬ ದೂರು ಬಂದಿತ್ತು. 15 ದಿನಗಳ ಒಳಗಾಗಿ ಅವರ ಬಾಕಿ ಪೂರ್ಣಗೊಳಿಸಬೇಕು.
- ರಾಜ್ಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಜಿಲ್ಲೆ, ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಹಾರ, ಅಲ್ಲಿನ ಕುಂದುಕೊರತೆ ಆಲಿಸಬೇಕು.
- 948 ಕೋಟಿ ರೂ. ಮುಂಗಾರು ಹಂಗಾಮಿಗೆ ಕೇಂದ್ರ ಮಂಜೂರು ಮಾಡಿದ್ದು, 650 ಕೋಟಿ ರೂ. ಬಿಡುಗಡೆ ಮಾಡಿದೆ. ಬಾಕಿ ಹಣವನ್ನು ಕೆಲವೇ ದಿನದಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡಲಿದೆ.
- ಕಂದಾಯ ಇಲಾಖೆಯಲ್ಲಿ ಭೂ ಪರಿವರ್ತನೆ ತಡವಾಗುತ್ತಿದ್ದು, ತ್ವರಿತವಾಗಿ ವಿಲೇವಾರಿ ಮಾಡಬೇಕು.
-11 ಲಕ್ಷ ರೈತರಿಗೆ ಈ ವರ್ಷದೊಳಗೆ ಅವರ ಮನೆಗೆ ತೆರಳಿ ಋಣಮುಕ್ತ ಪ್ರಮಾಣ ಪತ್ರ ನೀಡಲಾಗುತ್ತಿದೆ.
- ಸರ್ಕಾರಿ ಆಸ್ತಿ ಆವರಣಗಳಾದ ಸರ್ಕಾರಿ ಜಾಗದಲ್ಲಿ ಕಡ್ಡಾಯವಾಗಿ ಗಿಡ ನೆಡುವಂತೆ ಸೂಚಿಸಿದರು.
- ಗಂಗಾ ಕಲ್ಯಾಣ ಯೋಜನೆಯಲ್ಲಿ 11200 ಪ್ರಕರಣಗಳು ವಿದ್ಯುತೀಕರಣಕ್ಕೆ ಬಾಕಿ ಉಳಿದಿದ್ದು, ಜೂ.20 ರೊಳಗೆ ಎಲ್ಲ ಜಿಲ್ಲಾಧಿಕಾರಿಗಳು ಎಸ್ಕಾಂ ಜೊತೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು.
- ಪರಿಶಿಷ್ಟ ಜಾತಿ ,ಜನಾಂಗ, ಹಿಂದುಳಿದ ಜನಾಂಗದ 55 ಲಕ್ಷ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಲು ಜೂನ್ ಅಂತ್ಯದವರೆಗೆ ಸಮಯ ನೀಡಲಾಗಿದೆ.
- ಅಧಿಕಾರಿಗಳು ಹಾಸ್ಟೆಲ್‌ಗೆ ಭೇಟಿ ನೀಡಿ ಗುಣಮಟ್ಟ, ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಬೇಕು. ಅನಧಿಕೃತವಾಗಿ ಹಾಸ್ಟೆಲ್‌ನಲ್ಲಿ ಇರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.
- ಹೈ.ಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಆ ಭಾಗದ ಅಭಿವೃದ್ಧಿಗೆ ತೆಗೆದುಕೊಂಡಿರುವ ಕಾರ್ಯಕ್ರಮ ಪೂರ್ಣ ಗೊಳಿಸಿ ಸಿಬ್ಬಂದಿ ಕೊರತೆ ಇದ್ದರೆ ನಿವೃತ್ತ ಅಧಿಕಾರಿಗಳನ್ನು ನೇಮಕ ಮಾಡುವ ಭರವಸೆ ನೀಡಿದ್ದೇವೆ.
- ಅರಣ್ಯ ಮತ್ತು ಕಂದಾಯ ಜಮೀನು ಗುರುತಿಸುವ ಸಂದರ್ಭದಲ್ಲಿ ಹೊಂದಾಣಿಕೆ ಇರುವುದಿಲ್ಲ. ಹೀಗಾಗಿ ಜಮೀನು ಗುರುತಿಸಲು ಜಂಟಿ ಸಮೀಕ್ಷೆ ಮಾಡಬೇಕು.ಈ ಸಮೀಕ್ಷೆ 6 ತಿಂಗಳ ಒಳಗಾಗಿ ಪೂರ್ಣ ಮಾಡಬೇಕು.
- ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ 17 ಕೆರೆ ಪ್ರದೇಶ ಕಲುಷಿತ ಎಂದು ಹೇಳಿದ್ದು, ಇದರ ಶುದ್ಧೀಕರಣಕ್ಕೆ ಎಸ್ಟಿಪಿ ನಿರ್ಮಿಸಲು ನಗರಾಭಿವೃದ್ಧಿಗೆ ಸೂಚಸಿದ್ದು, ಕೊಳಚೆ ಪ್ರಾಧಿಕಾರ ರಚಿಸಿ, ಕಾಲಕಾಲಕ್ಕೆ ಪರಿಶೀಲನೆ ಮಾಡಬೇಕು.
- ರಾಜ್ಯ ಸರ್ಕಾರ ಕಡತ ವಿಲೇವಾರಿಗೆ ಇ-ಆಫೀಸ್ ಯೋಜನೆ ಜಾರಿ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳು ಜು.01 ರೊಳಗೆ ಜಾರಿ ಮಾಡಬೇಕು. ಸರ್ಕಾರಕ್ಕೂ ಇ-ಆಫೀಸ್ ಮೂಲಕವೇ ಕಡತ ಕಳುಹಿಸಬೇಕು.
- ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ರೈತರಿಗೆ 6 ಸಾವಿರ ಕೊಡಲು ಸುಮಾರು 11 ಲಕ್ಷ ರೈತರನ್ನು ನೋಂದಾಯಿಸಲಾಗಿದೆ. ಜೂನ್ ಅಂತ್ಯದ ಒಳಗೆ ಎಲ್ಲ ರೈತರ ನೋಂದಣಿ ಆಗಬೇಕು. 56 ಲಕ್ಷ ರೈತರು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ತರಲಾಗುತ್ತದೆ.
- ರೈತರ ಆತ್ಮಹತ್ಯೆ ಪ್ರಕರಣ ಕಡಿಮೆಯಾಗಿದೆ. ಈ ವರ್ಷ 940 , ಕಳೆದ ವರ್ಷ 1500 ವರದಿಯಾಗಿತ್ತು. ಈ ವರ್ಷದಲ್ಲಿ 44 ಪ್ರಕರಣ ಪರಿಹಾರ ಬಾಕಿ ಇದ್ದು, ಉಳಿಕೆ ಪ್ರಕರಣಕ್ಕೆ 5 ಲಕ್ಷ ಪರಿಹಾರ ನೀಡಲಾಗಿದೆ. ಇವರ ಮಕ್ಕಳಿಗೆ ಶಿಕ್ಷಣ, ಆರೋಗ್ಯ ವ್ಯವಸ್ಥೆ ನೀಡಲು ಸೂಚನೆ ನೀಡಿದರು.