ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೋವಿಡ್-19 ಹೆಸರಿನಲ್ಲಿ ನಡೆಯುತ್ತಿರುವ ಹಗಲು ದರೋಡೆ ನಡೆಯುತ್ತಿದೆ ಎಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ತನಿಖೆ ಮಾಡಿ ಖರೀದಿ ಆದೇಶ ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಅವರಿಗೆ ಈ ಸಂಬಂಧ ದೂರು ಸಲ್ಲಿಕೆ ಮಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಹಾಜರಾಗುವ ನಿಲಯಾರ್ಥಿಗಳಿಗೆ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ಯಾನರ್‌ಗಳನ್ನು ಸರಬರಾಜು ಮಾಡುವ ವಿಷಯದಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿದರು.
ನಿಲಯಾರ್ಥಿಗಳಿಗೆ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ಯಾನರ್‌ಗಳನ್ನು ಖರೀದಿಸಿ ವಿತರಿಸುವ ಸಲುವಾಗಿ 500 ಎಂ.ಎಲ್ ಬಾಟಲ್ ಸ್ಯಾನಿಟೈಸರ್‌ಗೆ ತಲಾ ರೂ. 600ರಂತೆ 1,867 ವಿದ್ಯಾರ್ಥಿನಿಲಯಗಳಿಗೆ ಅಂದಾಜು ಮೊತ್ತ ರೂ. 44,80,800 ಮತ್ತು ಥರ್ಮಲ್ ಸ್ಕ್ಯಾನರ್ ಖರೀದಿಗಾಗಿ ಅಂದಾಜು ಮೊತ್ತ ತಲಾ ರೂ. 9000ನಂತೆ 1,867 ವಿದ್ಯಾರ್ಥಿ ನಿಲಯಗಳಿಗೆ ಅಂದಾಜು ಮೊತ್ತ ಒಟ್ಟು ರೂ. 1,68,03,000 ವೆಚ್ಚವಾಗಿದೆ ಎಂದು ಅಂದಾಜು ಮಾಡಲಾಗಿದೆ. ವಿದ್ಯಾರ್ಥಿ ನಿಲಯಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ರಾಜ್ಯ ವಲಯದಿಂದ ಜಿಲ್ಲಾ ಮಟ್ಟಗಳಿಗೆ ಬಿಡುಗಡೆ ಮಾಡಲಾಗಿರುವ ಅನುದಾನದಲ್ಲಿ ಖರೀದಿಸಲು ಆದೇಶ ಹೊರಡಿಸಿ ಅಮಾಯಕ ಮಕ್ಕಳ ಹೆಸರಿನಲ್ಲಿ ಹಗಲು ದರೋಡೆಗೆ ಸಿದ್ಧವಾಗಿದೆ ಎಂದು ಆರೋಪಿಸಿದ್ದಾರೆ.