ಬೆಂಗಳೂರು: ನೇಮಕಾತಿ ಪತ್ರ ನೀಡುವಂತೆ ಒತ್ತಾಯಿಸಿ, ಪದವಿಪೂರ್ವ ಶಿಕ್ಷಣ ಉಪನ್ಯಾಸಕರ ಅಹೋರಾತ್ರಿ ಧರಣಿ 8ನೇ ದಿನವೂ ಮುಂದುವರೆದಿದೆ.
ಈ ಮಧ್ಯೆ ಪದವಿಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಧರಣಿ ನಿರತ ಉಪನ್ಯಾಸಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಕೊರೊನಾ ಹರಡುವಿಕೆ ನೆಪವೊಡ್ಡಿ ನೋಟಿಸ್ ನೀಡಿರುವ ಇಲಾಖೆ, ಸರ್ಕಾರಿ ಪಿಯು ಉಪನ್ಯಾಸಕರ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ಅಕ್ಟೋಬರ್ 12 ರಿಂದ ನೇಮಕಾತಿ ಆದೇಶವನ್ನು ಹೊರಡಿಸುವಂತೆ ಕೋರಿ, ಯಾವುದೇ ಅಧಿಕೃತ ಅನುಮತಿ ಪಡೆಯದೆ ಧರಣಿ ನಡೆಸುತ್ತಿದ್ದೀರಿ.
ಆಯ್ಕೆಗೊಂಡ ಆಭ್ಯರ್ಥಿಗಳ ನೇಮಕಾತಿಯನ್ನ ಯಾವುದೇ ಹಂತದಲ್ಲಿಯೂ ರದ್ದುಗೊಳಿಸುವುದಿಲ್ಲ. ಪದವಿಪೂರ್ವ ತರಗತಿಗಳು ಆರಂಭಗೊಂಡ ಕೂಡಲೇ ನೇಮಕಾತಿ ಆದೇಶವನ್ನ ಹೊರಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಜೊತೆಗೆ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಮನವೊಲಿಕೆ ಮಾಡಿದ್ರೂ, ಧರಣಿಯನ್ನ ಮುಂದುವರೆಸುತ್ತಿದ್ದೀರಾ. ದಿನದಿಂದ ದಿನಕ್ಕೆ ಪ್ರತಿಭಟನೆಯಲ್ಲಿ ಭಾಗಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿರುವವರು ಕೋವಿಡ್ ನಿಯಮ ಪಾಲಿಸಿಲ್ಲ. ಇದರಿಂದಾಗಿ ಕೊರೊನಾ ಮತ್ತಷ್ಟು ವ್ಯಾಪಿಸುವ ಸಾಧ್ಯತೆಯಿದೆ. ಜೊತೆಗೆ ನಿತ್ಯ ಕಚೇರಿಗೆ ಬರುವ ಅಧಿಕಾರಿಗಳು-ಸಿಬ್ಬಂದಿ ಆರೋಗ್ಯಕ್ಕೂ ಅಪಾಯವಾಗುವ ಸಾಧ್ಯತೆಯಿದ್ದು, ಕೆಲಸಕ್ಕೆ ಅಡಚಣೆಯಾಗುತ್ತಿದೆ. ಧರಣಿ ಹಿಂಪಡೆಯಿರಿ ಎಂದು ಉಲ್ಲೇಖಿಸಿ ನೋಟಿಸ್ ನೀಡಲಾಗಿದೆ.
ಧರಣಿ ನಿರತ ಉಪನ್ಯಾಸಕರಿಗೆ ಪಿಯು ಬೋರ್ಡ್ನಿಂದ ನೋಟಿಸ್ ಈ ಬಗ್ಗೆ ಸೋಶಿಯಲ್ ಮೀಡಿಯದಲ್ಲೂ ಬರೆದುಕೊಂಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ನೇಮಕಾತಿ ಆದೇಶ ಕೊಡಿಸುವುದು ನನ್ನ ಜವಾಬ್ದಾರಿ ಹಾಗೂ ಕರ್ತವ್ಯ. ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಸಮಯದಲ್ಲಿ ಹೆಚ್ಚು ಏನನ್ನೂ ಹೇಳಲಾರೆ. ಈಗಾಗಲೇ ಪ್ರತಿಭಟನೆಯ ಸ್ಥಳದಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡರ ಮುಖೇನ ಫೋನ್ ಕಾಲ್ ಮೂಲಕ (ಸ್ಟೀಕರ್ ಇಟ್ಟು) ಮಾತಾಡಿದ್ದು ಮತ್ತೊಮ್ಮೆ ಅಭ್ಯರ್ಥಿಗಳಿಗೆ ಮಾತು ಕೊಟ್ಟಿದ್ದೇನೆ. ಕೊರೊನಾ ಪಿಡುಗಿನ ಸಮಯದಲ್ಲಿ ತಮ್ಮ ಹೋರಾಟ ಮುಂದುವರಿಸದೆ ಇಲ್ಲಿಗೆ ಕೈ ಬಿಡುವಂತೆ ಮನವಿ ಮಾಡಿದ್ದಾರೆ.