ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಮಗಳಿಂದಲೇ ತಂದೆ ಕೊಲೆಯಾಗಿರುವ ಘಟನೆ ಮೈಕೊ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಪ್ತಿಕ್ ಬ್ಯಾನರ್ಜಿ (45 ವರ್ಷ) ಕೊಲೆಯಾದ ವ್ಯಕ್ತಿ. ಅಪ್ರಾಪ್ತ ವಯಸ್ಸಿನ ಮಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಕೌನ್ಸಲಿಂಗ್ ಮಾಡುತ್ತಿದ್ದಾರೆ. ಮೈಕೋ ಲೇಔಟ್ನ ಮಾರುತಿ ಪ್ಯಾರಡೈಸ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ಮೃತ ಸಪ್ತಿಕ್ ಬ್ಯಾನರ್ಜಿಗೆ ಇಬ್ಬರು ಮಕ್ಕಳಿದ್ದಾರೆ. ಮೂರ್ನಾಲ್ಕು ವರ್ಷದ ಹಿಂದೆ ಪತ್ನಿ ಮೃತಪಟ್ಟಿದ್ದು, ಆ ನೋವಿನಲ್ಲಿದ್ದ ಮೃತ ಸಪ್ತಿಕ್ ಖಿನ್ನತೆಗೊಳಗಾಗಿದ್ದ.
ಪ್ರತಿನಿತ್ಯ ಮನೆಯಲ್ಲೇ ಕುಡಿದು 15 ವರ್ಷದ ಮಗಳು ಮತ್ತು 12 ವರ್ಷದ ಮಗನ ಜೊತೆ ಗಲಾಟೆ ಮಾಡುತ್ತಿದ್ದಂತೆ. ನಿನ್ನೆ ರಾತ್ರಿ ಪಿಯಾನೋ ಮ್ಯೂಸಿಕ್ ಆನ್ ಮಾಡುವ ವಿಚಾರಕ್ಕೆ ತಂದೆ-ಮಗಳ ನಡುವೆ ಜಗಳ ನಡೆದಿದೆ. ಪಿಯಾನೋ ಆನ್ ಮಾಡದಂತೆ ತಂದೆಗೆ ಮಗಳು ಹೇಳಿದ್ದಾಳೆ. ಬಳಿಕ ಇಬ್ಬರ ನಡುವೆ ಗಲಾಟೆ ವಿಕೋಪಕ್ಕೆ ತಿರುಗಿದೆ.
ಮನೆಯಲ್ಲಿದ್ದ ಚಾಕು ತೆಗೆದುಕೊಂಡು ತಂದೆ ಮಗಳಿಗೆ ಇರಿಯಲು ಹೋಗಿದ್ದಾನೆ. ಭಯದಿಂದ ತಂದೆ ಬಳಿ ಇದ್ದ ಚಾಕು ಕಿತ್ತುಕೊಂಡು ಮಗಳು ತಂದೆಗೆ ಆಕಸ್ಮಿಕವಾಗಿ ಇರಿದಿದ್ದಾಳೆ. ರಕ್ತಸ್ರಾವದಿಂದ ಸಪ್ತಿಕ್ ಬ್ಯಾನರ್ಜಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಮೈಕೊ ಲೇಔಟ್ ಪೊಲೀಸರು ಐಪಿಸಿ ಸೆಕ್ಷನ್ 304 ಎ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.