ಬೆಂಗಳೂರು:ಕೆಲ ವಾರಗಳ ಹಿಂದೆ ಗಂಡನ ಮನೆಯವರು ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಮೃತ ಮಹಿಳೆಯ ಪೋಷಕರು ಗಂಡನ ಕುಟುಂಬಸ್ಥರ ವಿರುದ್ಧ ಗೋವಿಂದರಾಜನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಆತ್ಮಹತ್ಯೆಗೆ ಶರಣಾದ ಐಶ್ವರ್ಯ ಅವರ ತಾಯಿ ಉಷಾರಾಣಿ ಎಂಬವರು ನೀಡಿದ ದೂರಿನಂತೆ, ಪೊಲೀಸರು ಪತಿ ರಾಜೇಶ್, ಮಾವ ಗಿರಿಯಪ್ಪ, ಅತ್ತೆ ಸೀತಾ ಸೇರಿ ಐವರನ್ನು ಬಂಧಿಸಿದ್ದಾರೆ. ಮಗಳ ಸಾವಿಗೆ ಗಂಡನ ಮನೆಯವರು ನೀಡಿದ ಕಿರುಕುಳವೇ ಕಾರಣ ಎಂದು ಅವರು ಆರೋಪಿಸಿದ್ದಾರೆ.
ಪೋಷಕರು ನೀಡಿದ ದೂರಿನ ಪ್ರಕಾರ, ಐಶ್ವರ್ಯ ಅವರು ಐದು ವರ್ಷಗಳ ಹಿಂದೆ ರಾಜೇಶ್ ಅವರನ್ನು ಮದುವೆಯಾಗಿದ್ದರು. ಐಶ್ವರ್ಯ ಅಮೆರಿಕದಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇದಕ್ಕೂ ಮುನ್ನ ಮಾವ ಗಿರಿಯಪ್ಪ ತಮ್ಮ ಸೊಸೆಯನ್ನು ಅಮೆರಿಕಗೆ ಕಳುಹಿಸಿ ಮಾಸ್ಟರ್ಸ್ ವಿದ್ಯಾಭ್ಯಾಸ ಮಾಡಿಸಿದ್ದರು. ಕೌಟುಂಬಿಕ ಜೀವನ ಸುಖವಾಗಿಯೇ ಸಾಗುತ್ತಿತ್ತು.
ಐಶ್ವರ್ಯ ಸೋದರತ್ತೆ ಗೀತಾ ಮತ್ತು ಅತ್ತೆ ಮಗಳು ಲಿಪಿ ಐಶ್ವರ್ಯ ತಂದೆ ಜೊತೆಗೆ ಆಸ್ತಿ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದರು. ಐಶ್ವರ್ಯ ಅಮೆರಿಕದಲ್ಲಿ ಸ್ನೇಹಿತೆಯರ ಜೊತೆಗಿದ್ದ ಫೋಟೋಗಳನ್ನು ಆಕೆಯ ಇನ್ಸ್ಟಾಗ್ರಾಮ್ನಿಂದ ಗೀತಾ ಡೌನ್ಲೋಡ್ ಮಾಡಿಕೊಂಡಿದ್ದರು. ಐಶ್ವರ್ಯ ಮಾಡ್ರನ್ ಡ್ರೆಸ್ ಹಾಕಿದ್ದ ಫೋಟೋಗಳನ್ನು ಗೀತಾ ಎಡಿಟ್ ಮಾಡಿದ್ದರು. ಬಳಿಕ ಫೋಟೋಗಳನ್ನು ಗೀತಾ ಐಶ್ವರ್ಯ ಮಾವ ಗಿರಿಯಪ್ಪಗೆ ಕಳುಹಿಸಿ ನಿಮ್ಮ ಸೊಸೆ ಅಮೆರಿಕಗೆ ಓದೋಕೆ ಹೋಗಿಲ್ಲ ಶೋಕಿ ಮಾಡೋಕೆ ಹೋಗಿದ್ದಾಳೆ ಅಂತ ಸುಳ್ಳು ಹೇಳಿ ನಂಬುವಂತೆ ಮಾಡಿದ್ದರು ಎಂದು ಐಶ್ವರ್ಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದೇ ಅನುಮಾನದ ಮೇಲೆ ಅಮೆರಿಕದಿಂದ ಮನೆಗೆ ಬಂದ ಐಶ್ವರ್ಯಾರಿಗೆ ಗಂಡ ರಾಜೇಶ್, ಮಾವ ಗಿರಿಯಪ್ಪ, ಅತ್ತೆ ಸೀತಾ ಸೇರಿದಂತೆ ಮಾನಸಿಕವಾಗಿ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಇದರಿಂದ ಮನನೊಂದು ಐಶ್ವರ್ಯ ಕಳೆದ ತಿಂಗಳು 26ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಾಯಿ ತಿಳಿಸಿದ್ದಾರೆ.
ಐಶ್ವರ್ಯ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ಎರಡು ಕಣ್ಣುಗಳನ್ನು ಇಬ್ಬರು ಅಂಧರಿಗೆ ದಾನ ಮಾಡಲಾಗಿದೆ.
ಇದನ್ನೂ ಓದಿ:ಅತಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಸಬ್‌ಇನ್ಸ್‌ಪೆಕ್ಟರ್; ಕಾನ್ಸ್ಟೆಬಲ್ ಸಾವು