ಬೆಂಗಳೂರು:ಡಿಜಿಟಲ್ ಯುಗದಲ್ಲಿ ದತ್ತಾಂಶ ಕಳವು ಒಂದು ಪಿಡುಗಾಗಿದ್ದು, ಅದನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಬೇಕಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಖಾಸಗಿ ಕಂಪನಿಯ ದತ್ತಾಂಶ ಕದ್ದಿದ್ದ ಮತ್ತೊಂದು ಕಂಪನಿ ಸೇರಿದ್ದ ಬೆಂಗಳೂರು ಮೂಲದ ಆರ್. ನವೀನ್ ಮತ್ತು ಬಿ.ಎಸ್. ಸೃಷ್ಠಿ ಎಂಬುವರ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಲ್ಲದೆ, ಪ್ರಕರಣ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದರೆ ಪ್ರಕರಣದಲ್ಲಿ ಹಲವು ಪ್ರಶ್ನೆಗಳು ಎದುರಾಗಲಿವೆ ಮತ್ತು ಈ ಹಂತದಲ್ಲಿ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಜೊತೆಗೆ, ಅರ್ಜಿದಾರರ ಮೇಲೆ ಒಂದು ಕಂಪನಿಯ ದತ್ತಾಂಶ ಪಡೆದು ಅದನ್ನು ಮತ್ತೊಂದು ಎದುರಾಳಿ ಕಂಪನಿಯ ವ್ಯಾಪಾರ ಅಭಿವೃದ್ಧಿಗೆ ಬಳಸಿಕೊಂಡಿರುವ ಆರೋಪವಿದೆ. ಅದು ಕಂಪನಿಯ ಮಾಹಿತಿ ಅಥವಾ ದತ್ತಾಂಶ ಸೋರಿಕೆ ಮಾಡುವಂತಿಲ್ಲ ಎಂಬ ಒಪ್ಪಂದದ ಉಲ್ಲಂಘನೆಯಾಗಿದೆ. ಅದು ಅಪರಾಧವಾಗುತ್ತದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣ ಹನ್ನೆಲೆ ಏನು?:ಅರ್ಜಿದಾರರು ಖಾಸಗಿ ಕಂಪನಿಯಲ್ಲಿ ಉದ್ಯೋಗಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಆ ಕಂಪನಿ ನಡೆಸಿದ ತನಿಖೆಯಲ್ಲಿ ಅವರಿಬ್ಬರು ಕೆಲವು ದತ್ತಾಂಶಗಳನ್ನು ಕದ್ದು, ಆ ಮೂಲಕ ಮಾಹಿತಿ ಹಂಚಿಕೆ ಮಾಡಿಕೊಳ್ಳುವಂತಿಲ್ಲ ಎಂಬ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಅರ್ಜಿದಾರರು ಈ ಒಪ್ಪಂದ ಉಲ್ಲಂಘನೆ ಮಾಡಿ ದತ್ತಾಂಶವನ್ನು ಮತ್ತೊಂದು ಕಂಪನಿಗೆ ನೀಡುವ ಮೂಲಕ ಒಪ್ಪಂದದ ಉಲ್ಲಂಘನೆ ಮಾಡಿದ್ದರು.