ಬೆಂಗಳೂರು: ಡಿ ಜೆ ಹಳ್ಳಿ, ಕೆ ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ವಿಧಿವಿಜ್ಞಾನ ಇಲಾಖೆಯ ತಂಡ ಎಂಟ್ರಿ ಕೊಟ್ಟಿದ್ದು, ತನಿಖೆ ಮುಂದುವರೆಸಿದೆ.
ಮತ್ತೊಂದೆಡೆ ಪ್ರಮುಖ ಆರೋಪಿಗಳನ್ನ ಸಿಸಿಬಿ ಹಾಗೂ ಪೂರ್ವ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆ ವೇಳೆ ಸ್ಥಳೀಯರನ್ನ ಬಿಟ್ಟು ಬೇರೆಡೆಯಿಂದ ಬಂದಿದ್ದ ಪುಂಡರ ಗುಂಪು ಕೃತ್ಯವೆಸಗಿರುವ ವಿಚಾರ ಮೆಲ್ನೋಟಕ್ಕೆ ಗೊತ್ತಾಗಿದೆ. ಸ್ಥಳೀಯರ ಗುಂಪು ದಾಂಧಲೆ ಮಾಡಲು ಹೋದರೆ ಗುರುತು ಪತ್ತೆಯಾಗುವ ಸಂಭವವಿದ್ದು, ಇದೇ ಕಾರಣಕ್ಕೆ ಶಿವಾಜಿನಗರ, ಗೋರಿಪಾಳ್ಯ, ಚಾಮರಾಜಪೇಟೆ ಭಾಗದಿಂದ ಬಂದು ಗಲಭೆ ಮಾಡಿರುವ ವಿಚಾರ ಬಯಲಾಗಿದೆ.
ಬೆಂಗಳೂರು ಗಲಭೆ ಪೂರ್ವ ನಿಯೋಜಿತ..?: ವಿಡಿಯೋ ವೈರಲ್..!
ಸಿಸಿಬಿ ತಾಂತ್ರಿಕ ವಿಭಾಗದಿಂದ ಆರೋಪಿ ಮುಜಾಯಿಲ್ ಪಾಷ ಸೇರಿ ಬಂಧಿತ ಆರೋಪಿಗಳ ಮೊಬೈಲ್ ಕರೆಗಳ ಪರಿಶೀಲನೆ ನಡೆಸಿದ್ದಾರೆ. ಮುಜಾಯಿಲ್ ಗಲಭೆಗೂ ಮುನ್ನ ಸಭೆ ನಡೆಸಿ ವ್ಯವಸ್ಥಿತವಾಗಿ ಪ್ಲಾನ್ ಮಾಡಿ ಠಾಣೆ ಬಳಿ ಬಂದಿದ್ದ ಎನ್ನಲಾಗ್ತಿದೆ. ಆರೋಪಿ ಮುಜಾಯಿಲ್ ಜೊತೆ ಎಸ್ಡಿಪಿಐನ ಮೂರ್ನಾಲ್ಕು ಸದಸ್ಯರು ಭಾಗಿಯಾಗಿದ್ದಾರೆ ಎಂಬ ಶಂಕೆ ಸಹ ವ್ಯಕ್ತವಾಗಿದೆ. ಪ್ರಮುಖ ಆರೋಪಿಗಳು ಗಲಭೆಗೂ ಮುನ್ನ ಸೇರಿದ್ದ ಸ್ಥಳದ ಬಗ್ಗೆ ಮಾಹಿತಿ ಪಡೆಯಲು ಸಿಸಿಟಿವಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಗಲಭೆ ಪ್ರಕರಣ: 9 ಕೇಸ್ ದಾಖಲು, ನವೀನ್ ತಾಯಿ ಹೇಳಿಕೆ ಪಡೆದ ಪೊಲೀಸರು
ಆರು ಆಯಾಮಗಳಲ್ಲಿ ಗಲಭೆ ತನಿಖೆ ನಡೆಸುತ್ತಿರುವ ತಂಡ
- ಸಿಸಿಟಿವಿ ದೃಶ್ಯಾವಳಿ ಮತ್ತು ಮಾಧ್ಯಮಗಳಲ್ಲಿ ಬಂದ ದೃಶ್ಯ ಆಧರಿಸಿ ತನಿಖೆ
- ಆರೋಪಿಗಳ ಮೊಬೈಲ್ ಕರೆ ಹಾಗೂ ಮೆಸೇಜ್ಗಳ ಪರಿಶೀಲನೆ ಮತ್ತು ಠಾಣೆಯ ಬಳಿ ಜಮಾಯಿಸಿದ್ದ ಸ್ಥಳದಲ್ಲಿನ ಉದ್ರಿಕ್ತರ ಗುಂಪಿನ ಮೊಬೈಲ್ ಟ್ರ್ಯಾಕ್
- ವ್ಯವಸ್ಥಿತವಾಗಿ ಸಂಚು ರೂಪಿಸಿದ ಹಿನ್ನೆಲೆ ಮೊದಲು ಸಭೆ ನಡೆಸಿದ್ದ ಜಾಗ ಹಾಗೂ ಸ್ಥಳೀಯರಿಂದ ಮಾಹಿತಿ
- ಮುಜಾಯಿಲ್ ಪಾಷ ಮತ್ತು ಉಳಿದ ಆರೋಪಿಗಳ ತೀವ್ರ ವಿಚಾರಣೆ
- ಆರೋಪಿ ನವೀನ್ ಪ್ರಚೋದಿತ ಪೋಸ್ಟ್ ಮಾಡಿದ್ದ ಬಗ್ಗೆ ಕುಟುಂಬಸ್ಥರ ವಿಚಾರಣೆ
- ಪೊಲೀಸ್ ವಾಹನಗಳನ್ನ ಜಖಂಗೊಳಿಸಿ ಮಾರಕಾಸ್ತ್ರಗಳಿಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಪುಂಡರ ಶೋಧಕಾರ್ಯಕ್ಕೆ ಸ್ಥಳೀಯರ ಸಹಾಯ ಪಡೆಯಲು ಮುಂದಾಗಿರುವ ತನಿಖಾಧಿಕಾರಿಗಳತಂಡ