ಬಿಡದಿ ತೋಟದ ಮನೆಯಲ್ಲಿ ಹೆಚ್ಡಿಕೆ ಕುಟುಂಬದಿಂದ ಆಯುಧ ಪೂಜೆ ಆಚರಣೆ ಬೆಂಗಳೂರು: ರಾಜ್ಯ ಬಿಜೆಪಿ ಕಚೇರಿಯಲ್ಲಿ ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಆಯುಧ ಪೂಜೆ ನೆರವೇರಿಸಲಾಯಿತು. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಬಿಡದಿಯ ತಮ್ಮ ತೋಟದ ಮನೆಯಲ್ಲಿ ಆಯುಧ ಪೂಜೆಯಲ್ಲಿ ಪಾಲ್ಗೊಂಡರು.
ಮಲ್ಲೇಶ್ವರದಲ್ಲಿರುವ ಬಿಜೆಪಿ ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಆಯುಧ ಪೂಜೆ ಮತ್ತು ವಿಜಯದಶಮಿ ಪೂಜೆ ನಡೆಯಿತು. ನಳಿನ್ ಕುಮಾರ್ ಸಮ್ಮುಖದಲ್ಲಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು. ಕಟೀಲ್ ಮಾತನಾಡಿ, "ಈ ವರ್ಷ ದಸರಾ ಹಬ್ಬ ಎಲ್ಲರಿಗೂ ಶುಭ ತರಲಿ. ದೇಶಕ್ಕೆ ಒಳಿತಾಗಲಿ. ಕರ್ನಾಟಕ ಅಭಿವೃದ್ಧಿ ಆಗಲಿ" ಎಂದರು.
ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ನೆರವೇರಿಸಿದ ಕಟೀಲ್ ಮತ್ತೊಂದೆಡೆ, ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಬಿಡದಿಯ ತಮ್ಮ ತೋಟದ ಮನೆಯಲ್ಲಿ ಆಯುಧ ಪೂಜೆ ಹಾಗು ಗೋಪೂಜೆ ಮಾಡಿದರು. ಈ ಸಂದರ್ಭದಲ್ಲಿ ಕುಟುಂಬಸ್ಥರು ಉಡುಗೊರೆ ವಿತರಿಸಿದರು.
ಬಿಡದಿಯ ತೋಟದ ಮನೆಯಲ್ಲಿ ಗೋಪೂಜೆಯಲ್ಲಿ ಭಾಗಿಯಾದ ಹೆಚ್ಡಿಕೆ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಎರಡು ದಿನಗಳ ಹಿಂದೆ ಆಯುಧ ಪೂಜೆ ನೆರವೇರಿಸಲಾಗಿತ್ತು. ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಮಾಜಿ ಶಾಸಕರಾದ ಸುರೇಶ್ ಗೌಡ, ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಹಿರಿಯ ಮುಖಂಡ ರಾಜಣ್ಣ ಮುತಾದವರ ಉಪಸ್ಥಿತಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಆಯುಧ ಪೂಜೆ ನೆರವೇರಿಸಿದ್ದರು.
ಇದನ್ನೂ ಓದಿ:ಬಾಗಲಕೋಟೆಯಲ್ಲಿ ಗಮನ ಸೆಳೆದ ಛಪ್ಪನ್ ಭೋಗ್ ಆಚರಣೆ