ಬೆಂಗಳೂರು:ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ಸಂಜೆ ಸುರಿದ ಗುಡುಗು ಸಹಿತ ಭಾರೀ ಮಳೆಗೆ ನಗರದ ಬಹುತೇಕ ಕಡೆ ಮರಗಳು ನೆಲಕ್ಕುರುಳಿವೆ. ಪರಿಣಾಮ ಬಹುತೇಕ ರಸ್ತೆಗಳಲ್ಲಿ ಕರೆಂಟ್ ಇಲ್ಲದೇ ಇದ್ದು, ಮತ್ತೊಂದೆಡೆ ಮನೆಯ ಮುಂದೆ ನಿಲ್ಲಿಸಿದ್ದ ಕಾರು, ಬೈಕ್, ಆಟೋಗಳು ಜಖಂಗೊಂಡಿವೆ.
ಮಲ್ಲೇಶ್ವರಂನ 15ನೇ ಕ್ರಾಸ್ನಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಕಾರ್ ಮೇಲೆ ಬೃಹದಾಕಾರದ ಮರ ಬಿದ್ದಿದ್ದು, ಕಾರು ಜಖಂ ಆಗಿದೆ. ಸದ್ಯ ಕಾರಿನಲ್ಲಿ ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ.
ಬೆಂಗಳೂರಿನಲ್ಲಿ ಸುರಿದ ಮಳೆಗೆ ಜಖಂಗೊಂಡ ವಾಹನಗಳು ನಗರದದ ಮಲ್ಲೇಶ್ವರಂ, ಗಾಂಧಿನಗರ, ಜಯನಗರ, ಶಾಂತಿನಗರ, ಯಶವಂತಪುರ, ಆರ್.ಟಿ. ನಗರ ಹೀಗೆ ಬಹುತೇಕ ಕಡೆಗಳಲ್ಲಿ ಮಳೆಯ ಅವಾಂತರದಿಂದ ರಸ್ತೆ ಬದಿ ನೀರು ಇರುವ ಕಾರಣ ಮುಂಜಾನೆ ಟ್ರಾಫಿಕ್ ಜಾಮ್ ಉಂಟಾಗಿದೆ. ಹೀಗಾಗಿ ಟ್ರಾಫಿಕ್ ಪೊಲೀಸರು ಮುಂಜಾನೆ ರಸ್ತೆಗಿಳಿದು ಟ್ರಾಫಿಕ್ ನಿಯಂತ್ರಣ ಮಾಡಿದ್ದಾರೆ.
ಇನ್ನು ನಗರದ ಹಲವೆಡೆ 88 ಮರಗಳು ಹಾಗೂ ಕೊಂಬೆಗಳು ಧರೆಗುರುಳಿದ್ದು, ಜೊತೆಗೆ 39 ವಿದ್ಯುತ್ ಕಂಬಗಳು ಮುರಿದು ಬಿದ್ದು ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಎರಡು ದಿನದಿಂದ ವಿದ್ಯುತ್, ನೀರು ಇಲ್ಲದೆ ಜನ ಪರದಾಡುವಂತಾಗಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಮಾಹಿತಿ ಪ್ರತಿ ಆರ್.ಆರ್. ನಗರದಲ್ಲಿ 35 ಮಿ.ಮೀ., ಯಲಹಂಕ ವಲಯದಲ್ಲಿ 32 ಮಿ.ಮೀ., ಪಶ್ಚಿಮ ವಲಯದ ನಂದಿನಿ ಲೇಔಟ್ ನಲ್ಲಿ 18 ಮಿ.ಮೀ.ನಷ್ಟು ಮಳೆ ಪ್ರಮಾಣ ದಾಖಲಾಗಿದ್ದು, ಉಳಿದ ವಲಯಗಳಲ್ಲಿ 10ರಿಂದ 14 ಮಿ.ಮೀ. ಮಳೆ ದಾಖಲಾಗಿದೆ.