ಬೆಂಗಳೂರು: ಕೊರೊನಾ ಲಾಕ್ ಡೌನ್ನಿಂದಾಗಿ ರಾಜ್ಯ ಆರ್ಥಿಕ ಪರಿಸ್ಥಿತಿ ನಲುಗಿದ್ದು, ಸುಧಾರಿಸಿಕೊಳ್ಳಲು ಬಹಳಷ್ಟು ಸಮಯಾವಕಾಶ ಬೇಕಾಗಿದೆ. ಇಂಥಹ ಸಂದರ್ಭದಲ್ಲಿ ಮುಷ್ಕರ ಕೈಗೊಂಡಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಎಫ್ಕೆಸಿಸಿಐ ಅಭಿಪ್ರಾಯ ವ್ಯಕ್ತಪಡಿಸಿದೆ.
ರಾಜ್ಯ ಸರ್ಕಾರವು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವ ಸಂಬಂಧ ರೈತರು ಹಾಗೂ ರೈತಪರ ಸಂಘಟನೆಗಳು ಸೆ. 28 ರಂದು ರಾಜ್ಯಾದ್ಯಂತ ಮುಷ್ಕರ ನಡೆಸಲು ನಿರ್ಧರಿಸಿವೆ.
ಸರ್ಕಾರವು ರೈತರ ಹಾಗೂ ವರ್ತಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಬಹುದಿನಗಳ ಬೇಡಿಕೆಯಾದ ಎಪಿಎಂಸಿ ಸೆಸ್ ಶೇ 1.5 ರಿಂದ ಶೇ. 0.35ಗೆ ಇಳಿಸಿದುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಸರ್ಕಾರವು ರೈತರಿಗಾಗಲೀ ಅಥವಾ ವರ್ತಕರಿಗಾಗಲೀ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ ಎಂದು ಎಫ್ಕೆಸಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವ ಸಂಬಂಧ ಪರ ಹಾಗೂ ವಿರೋಧದ ಅಭಿಪ್ರಾಯಗಳು ಈಗಾಗಲೇ ಮಾಧ್ಯಮದಲ್ಲಿ ವ್ಯಕ್ತವಾಗುತ್ತಿದ್ದು, ಸರ್ಕಾರದೊಂದಿಗೆ ಮುಖಾಮುಖಿ ಚರ್ಚಿಸಿ ರೈತರ ಹಾಗೂ ವರ್ತಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಚರ್ಚಿಸುವುದು ಸೂಕ್ತವೆಂದು ಎಫ್ಕೆಸಿಸಿಐ ಸಲಹೆ ನೀಡಿದೆ.