ಬೆಂಗಳೂರು:ರಾಜ್ಯದಲ್ಲಿ ಮೂಲ-ವಲಸೆ ಕಾಂಗ್ರೆಸ್ ನಾಯಕರ ನಡುವೆ ಸಾಮರಸ್ಯ ಮೂಡುದಿಲ್ಲ ಎನ್ನುವುದು ಹಲವು ಸಾರಿ ಸಾಬೀತಾಗಿದ್ದು, ಇದೀಗ ಇವರ ನಡುವಿನ ಆಂತರಿಕ ತಿಕ್ಕಾಟ ಪಕ್ಷದ ಪ್ರಗತಿಯ ಮೇಲೆ ಮಾರಕ ಪರಿಣಾಮ ಬೀರುವ ಲಕ್ಷಣ ತೋರಿಸುತ್ತಿದೆ.
ಕಾಂಗ್ರೆಸ್ ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಸಾಮರಸ್ಯ ಕೊರತೆ ಅಪಾರವಾಗಿ ಗೋಚರಿಸುತ್ತಿದೆ. ಆಂತರಿಕ ತಿಕ್ಕಾಟ, ಕಿತ್ತಾಟ, ಮೇಲಾಟಗಳು ಆಪ್ತ ವಲಯಗಳಲ್ಲಿ ಆಗಾಗ ಕೇಳಿಬರುತ್ತಿರುತ್ತವೆ ಎಂಬ ಮಾತಿದೆ.
ಈ ಮಧ್ಯೆ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯಾಗಿದ್ದ, ಸಿದ್ದರಾಮಯ್ಯ ಪಾಲಿಗೆ ಗೆಲ್ಲಲೇಬೇಕೆಂಬ ಅನಿವಾರ್ಯತೆ ತಂದಿದ್ದ ಮೇಯರ್ ಆಯ್ಕೆ ಕಾಂಗ್ರೆಸ್ ಕೈ ತಪ್ಪಿದೆ. ಅಲ್ಲದೇ ಸಿದ್ದರಾಮಯ್ಯ ಪಾಲಿಗೆ ದೊಡ್ಡ ಮುಖಭಂಗವಾಗಿದೆ.
ವ್ಯವಸ್ಥಿತ ಕಾರ್ಯವಾ...?
ಇದೊಂದು ಸಿದ್ದರಾಮಯ್ಯ ವಿರುದ್ಧದ ವ್ಯವಸ್ಥಿತ ಸಂಚು ಎಂಬ ಮಾತು ಕೇಳಿಬರುತ್ತಿದೆ. ಯಾವುದೇ ಕಾರಣಕ್ಕೂ ಈ ಸಾರಿ ಮೇಯರ್ ಸ್ಥಾನ ಬಿಜೆಪಿ ಪಾಲಾಗಬಾರದು, ಎರಡು ಅವಧಿಗೆ ಜೆಡಿಎಸ್ಗೆ ನೀಡಿ ಆಗಿದೆ. ಈ ಸಾರಿ ಅವರ ಸಹಕಾರದೊಂದಿಗೆ ನಾವು ಪಡೆಯೋಣ ಎಂಬ ಸಿದ್ಧತೆಯಲ್ಲಿ ಕೈ ನಾಯಕರು ಇದ್ದರು. ಮೇಲ್ಮಟ್ಟದಲ್ಲಿ ಇದು ಹಾಗೆಯೇ ಗೋಚರಿಸಿತು. ಎಲ್ಲವೂ ಸರಿಯಾಗಿದೆ ಎಂದುಕೊಳ್ಳುವ ಹೊತ್ತಿಗೆ ಮತ್ತೆ ಉಲ್ಟಾ ಹೊಡೆದ ಜೆಡಿಎಸ್ ತಮ್ಮ ಅಭ್ಯರ್ಥಿಯನ್ನು ಮೇಯರ್ ಆಗಿ ಕಾಂಗ್ರೆಸ್ನ ಕೆಲ ಸದಸ್ಯರ ಬೆಂಬಲದೊಂದಿಗೆ ಕಾರ್ಯಸಾಧುವಾಗಿಸಿಕೊಂಡಿತು. ಇದರ ಹಿಂದೆ ಸ್ಥಳೀಯ ನಾಯಕ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್, ಕೆಪಿಸಿಸಿ ಕಾರ್ಯಾಧ್ಯಕ್ಷ ದ್ರುವನಾರಾಯಣ ವೈಫಲ್ಯವಿದೆ ಎಂದು ಬಿಂಬಿಸಲಾಗುತ್ತಿದೆ. ಮೇಯರ್ ಸ್ಥಾನ ಕೈತಪ್ಪಿಸುವಲ್ಲಿ ಪಕ್ಷದ ಕೆಲ ರಾಜ್ಯ ನಾಯಕರೇ ಜೆಡಿಎಸ್ಗೆ ಬೆಂಬಲ ಸೂಚಿಸಲು ತಿಳಿಸಿದ್ದರು ಎಂಬ ಮಾಹಿತಿ ಇದೆ.
ನಿಜ ಅನುಮಾನದ ನೋಟ ಶಿವಕುಮಾರ್ ಅವರತ್ತಲೇ ಸಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಶ್ಚಿತವಾಗಿ ಸಿದ್ದರಾಮಯ್ಯ ಸಿಎಂ ಅಭ್ಯರ್ಥಿ. ಆದರೆ ರೇಸ್ನಲ್ಲಿ ಇರುವುದಿಲ್ಲ ಎಂದು ಹೇಳಿಕೊಂಡರೂ ಡಿಕೆಶಿ ಕೂಡ ಸಿಎಂಸ್ಥಾನ ಆಕಾಂಕ್ಷಿ. ಈ ಹಿನ್ನೆಲೆ ಸಿದ್ದರಾಮಯ್ಯ ಅವರನ್ನು ನೇರವಾಗಿ ಎದುರಿಸುವುದು ಬಹಳ ಕಷ್ಟ. ಹೀಗಾಗಿ ಮತ್ತೊಮ್ಮೆ ತಮ್ಮ ಆಪ್ತ ಸ್ನೇಹಿತ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಬೆಂಬಲ ಕೇಳಿ ಯಶಸ್ಸು ಪಡೆದಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಅಂದಹಾಗೆ ಇದಕ್ಕೆ ಕಾರಣವೂ ಇದೆ. ಸಿದ್ದರಾಮಯ್ಯ ಸದ್ಯ ರಾಜ್ಯಮಟ್ಟದ ಹಿರಿಯ ಕಾಂಗ್ರೆಸ್ ನಾಯಕರಾದರೂ, ಇವರ ತವರು ಜಿಲ್ಲೆ ಮೈಸೂರು. ಇಲ್ಲಿಯೇ ಹಿಡಿತ ತಪ್ಪಿರುವಾಗ, ತಮ್ಮ ಅಸ್ಥಿತ್ವದ ಪ್ರಶ್ನೆ ಕಾಡುವ ಸ್ಥಿತಿಗೆ ಸಿದ್ದರಾಮಯ್ಯ ತಳ್ಳಲ್ಪಟ್ಟಿದ್ದಾರೆ. ಈ ವಿಚಾರವಾಗಿ ಕಳೆದ ಎರಡು ದಿನದಿಂದ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಸದ್ಯ ಪ್ರಕೃತಿ ಚಿಕಿತ್ಸೆ ನೆಪವೊಡ್ಡಿ ಆಯುವರ್ವೇದ ಚಿಕಿತ್ಸೆಗೆ ತೆರಳಿದ್ದಾರೆ. ಇಂದು ದಿಲ್ಲಿ ಹಾಗೂ ನಾಳೆ ಮೈಸೂರಿಗೆ ಪ್ರಯಾಣ ಬೆಳೆಸುತ್ತಿದ್ದಾರೆ.
ಒಟ್ಟಾರೆ ಸಿದ್ದರಾಮಯ್ಯ ಯಾರ ಕೈಗೂ ಸಿಗದೇ ತಪ್ಪಿಸಿಕೊಳ್ಳುತ್ತಿದ್ದಾರೆ. ಮೈಸೂರಿನ ಹಿನ್ನಡೆ ಅವರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರಿಗೂ ಇದೇ ಬೇಕಾಗಿದೆ ಎಂಬ ಮಾತು ಕೇಳಿಬರುತ್ತಿದೆ. ತವರಲ್ಲೇ ಸಿದ್ದರಾಮಯ್ಯ ಡಮ್ಮಿ ಅಂತ ಸಾಬೀತುಪಡಿಸಿದರೆ ಮುಂದಿನ ಚುನಾವಣೆಯಲ್ಲಿ ತಮ್ಮ ದಾರಿ ಸುಗಮವಾಗಲಿದೆ ಎಂಬ ಚಿಂತನೆಗೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಮೈತ್ರಿ ಸ್ನೇಹಿತ, ಜೋಡೆತ್ತು ಎಂದೆಲ್ಲಾ ಬಣ್ಣನೆಗೆ ಬಾಜನರಾಗಿದ್ದ ಕುಮಾರಸ್ವಾಮಿ ಹಾಗೂ ಡಿಕೆಶಿ ಪರೋಕ್ಷವಾಗಿ ಕೈಜೋಡಿಸಿದ್ದಾರೆ ಎಂಬ ಗಂಭೀರ ಆರೋಪ ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಸಿದ್ದರಾಮಯ್ಯ ಸೋತ ನಾಯಕ ಎಂದು ಬಿಂಬಿಸುವ ಯತ್ನ ಪಕ್ಷದ ಕೆಲ ನಾಯಕರ ವಲಯದಲ್ಲಿ ನಡೆಯುತ್ತಿದೆ. ಇದರ ನೇತೃತ್ವ ವಹಿಸಿದವರು ಬಹಳ ಮಹತ್ವಾಕಾಂಕ್ಷಿಗಳಾಗಿದ್ದು, ಸಿದ್ದರಾಮಯ್ಯರನ್ನು ರಾಜಕೀಯವಾಗಿ ತುಳಿಯಲು ತಮಗೆ ಸಿಗುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಒಟ್ಟಾರೆ ಇದೇ ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಮಗ್ಗುಲ ಮುಳ್ಳಾಗಿ ಕಾಡಲಿದೆ ಎಂಬ ಬೇಸರದ ನುಡಿ ನಿಷ್ಠಾವಂತ ಕಾಂಗ್ರೆಸ್ ನಾಯಕರಿಂದ ಕೇಳಿಬರುತ್ತಿದೆ.