ಬೆಂಗಳೂರು: ಕೆಲ ಷರತ್ತುಗಳೊಂದಿಗೆ ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ್ದೇವೆ ಎಂದು ದಲಿತ ಮುಖಂಡ ಹಾಗೂ ಸಾಹಿತಿ ಇಂದೂಧರ ಹೊನ್ನಾಪುರ ತಿಳಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಜತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ದಲಿತ ಸಂಘರ್ಷ ಸಮಿತಿಯ ಐಕ್ಯ ಹೋರಾಟ ಸಾಧನಾ ಸಮಿತಿ ಪರವಾಗಿ ನಾವು ಇಂದು ಆಗಮಿಸಿದ್ದೇವೆ. ರಾಜ್ಯದ 224 ವಿಧಾನಸಭೆ ಕ್ಷೇತ್ರದಲ್ಲಿ ನಾವು ಕಾಂಗ್ರೆಸ್ ಬೆಂಬಲಿಸಿದ್ದೇವೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ಜನಪರ ಹಾಗೂ ಜಾತ್ಯತೀತ ಹೋರಾಟ ಮಾಡುತ್ತಿದ್ದೇವೆ. ಕಳೆದ 9 ವರ್ಷದಿಂದ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನ ಗಮನಿಸಿ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಿಕೊಳ್ಳಲು ರಾಜ್ಯದಲ್ಲಿಯೂ ಕಾಂಗ್ರೆಸ್ ಸರ್ಕಾರ ಮತ್ತೆ ಬರಬೇಕೆಂದು ಕೆಲ ಷರತ್ತುಗಳೊಂದಿಗೆ ಬೆಂಬಲ ಸೂಚಿಸಿದ್ದೇವೆ ಎಂದರು.
ಬಿಜೆಪಿಯವರು ಸಂವಿಧಾನ ಬದಲಿಸುವ ಮಾತನ್ನು ಬಹಿರಂಗವಾಗಿ ಆಡುತ್ತಿದ್ದಾರೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದಲಿತರ ಮೇಲಿನ ದೌರ್ಜನ್ಯ ಮಿತಿ ಮೀರಿದೆ. ದಲಿತರಿಗೆ ಇದ್ದ ಸೌಕರ್ಯವನ್ನು ಸರ್ಕಾರ ಕಿತ್ತುಕೊಂಡಿದೆ. ಮಕ್ಕಳಿಗೆ ನೀಡುತ್ತಿದ್ದ ಪ್ರತಿಭಾ ಪುರಸ್ಕಾರ ನಿಲ್ಲಿಸಲಾಗಿದೆ. ಬಹಿರಂಗವಾಗಿ ಸಂವಿಧಾನ ಬದಲಿಸುವ ಮಾತನ್ನು ಬಿಜೆಪಿಯವರು ಆಡುತ್ತಿದ್ದಾರೆ. ತಳ ಸಮುದಾಯದವರು ಎಲ್ಲೆಡೆ ಬದುಕಬೇಕು, ಬಾಳಬೇಕು ಎಂಬ ವಾತಾವರಣ ದೇಶದಲ್ಲಿ ನಿರ್ಮಾಣ ಆಗಬೇಕು ಎಂದು ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದೇವೆ.
ಬಡವರು - ದುರ್ಬಲರು ನೆಮ್ಮದಿಯ ಬದುಕು ಬಾಳುವಂತಾಗಬೇಕು:ನಾವು ಕೆಲ ಷರತ್ತು ಹಾಕಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಸಂವಿಧಾನದ ಮೌಲ್ಯ ಎತ್ತಿ ಹಿಡಿಯುವ ಎಲ್ಲ ಕೆಲಸ ಮಾಡಬೇಕು. ಜನ ವಿರೋಧಿ ಕಾಯ್ದೆ ವಾಪಸ್ ಪಡೆಯಬೇಕು. ರೈತವಿರೋಧಿ, ಮತಾಂತರ ನಿಷೇಧ, ಗೋಹತ್ಯಾ ನಿಷೇಧ ಕಾಯ್ದೆ ವಾಪಸ್ ಪಡೆದು ಒಂದು ಜನಸ್ನೇಹಿ, ಜನಪರ ಸರ್ಕಾರ ನೀಡಬೇಕೆಂದು ಮನವಿ ಮಾಡಿದ್ದೇವೆ. ಬಡವರು, ದುರ್ಬಲರು ನೆಮ್ಮದಿಯ ಬದುಕು ಬಾಳುವ ಅವಕಾಶ ಆಗಬೇಕು ಎಂಬುದು ನಮ್ಮ ಮನವಿ ಎಂದರು.