ಬೆಂಗಳೂರು : ಬಿಬಿಎಂಪಿ ನಿರ್ಗಮಿತ ಆಯುಕ್ತ ಅನಿಲ್ ಕುಮಾರ್ ಅವರನ್ನು ಭವಿಷ್ಯದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆ ದಕ್ಕದಂತೆ ಮಾಡುವ ಪ್ರಯತ್ನ ನಡೆದಿದೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ. ಹಾಗಾಗಿ ಅವರನ್ನ ಗೌರವಯುತವಾಗಿ ನಡೆಸಿಕೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಡಿಎಸ್ಎಸ್ ಮನವಿ ಸಲ್ಲಿಸಿದೆ.
ದಲಿತ ಸಂಘರ್ಷ ಸಮಿತಿ ಮುಖಂಡ ವೆಂಕಟಸ್ವಾಮಿ ಬಿಬಿಎಂಪಿ ಆಯುಕ್ತ ಸ್ಥಾನದಿಂದ ಅನಿಲ್‌ಕುಮಾರ್ ದಿಢೀರ್ ವರ್ಗಾವಣೆ ಬೆನ್ನಲ್ಲೇ ದಲಿತ ಸಂಘರ್ಷ ಸಮಿತಿ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಮುಂದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿತು. ವರ್ಗಾವಣೆ ಹೆಸರಿನಲ್ಲಿ ಅಗೌರವಯುತವಾಗಿ ನಡೆಸಿಕೊಂಡಿರುವುದು ಸರಿಯಲ್ಲ. ಕೂಡಲೇ ಅನಿಲ್‌ಕುಮಾರ್ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಮಹತ್ವವಲ್ಲದ ಹುದ್ದೆಗೆ ವರ್ಗಾವಣೆ ಮಾಡಿರುವುದನ್ನು ಸರಿಪಡಿಸಬೇಕು ಎಂದು ಮನವಿ ಸಲ್ಲಿಸಿತು.
ಸಿಎಂ ಭೇಟಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಡಿಎಸ್ಎಸ್ ಮುಖಂಡ ವೆಂಕಟಸ್ವಾಮಿ, ವರ್ಗಾವಣೆ ಮಾಡುವುದು ಸಾಮಾನ್ಯ. ಆದರೆ, ಇದ್ದಕ್ಕಿದ್ದಂತೆ ಮುಖ್ಯವಲ್ಲದ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ದಲಿತ ಎನ್ನುವ ಕಾರಣಕ್ಕೆ ಅವರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆ ಲಭಿಸುವುದನ್ನು ತಪ್ಪಿಸುವ ಪ್ರಯತ್ನ ನಡೆದಿದೆ. ಇದರ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದೇವೆ. ಅನಿಲ್‌ಕುಮಾರ್ ಅವರನ್ನು ಗೌರವಯುತವಾಗಿ ನಡೆಸಿ ಕೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದರು.
ಪೌರಕಾರ್ಮಿಕರಿಗೆ ಆರೋಗ್ಯದ ಸಮಸ್ಯೆ ಆಗುತ್ತಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಆರು ಜನ ಮೃತರಾಗಿದ್ದಾರೆ. ಪೌರಕಾರ್ಮಿಕರ ಆರೋಗ್ಯದ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು. ಬೆಂಗಳೂರಿನ 8 ವಲಯದಲ್ಲೂ ಸೂಕ್ತ ಆರೋಗ್ಯ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಕಸವನ್ನು ತೆಗೆಯದೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಕೂಡಲೇ ಬಿಬಿಎಂಪಿ ಆಯುಕ್ತರಿಗೆ ಕರೆ ಮಾಡಿ ಸಮಸ್ಯೆ ಪರಿಹರಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಅಲ್ಲದೇ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ. ಒಂದು ವೇಳೆ ಈ ಭರವಸೆ ಈಡೇರಿಸದೇ ಇದ್ದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹೊಸಕೋಟೆ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಲಾಕ್ಅಪ್ ಡೆತ್ ಆಗಿದೆ. ಈವರೆಗೂ ಪೊಲೀಸರನ್ನು ತನಿಖಾಧಿಕಾಗಳು ಬಂಧಿಸಿಲ್ಲ. ಹೈಕೋರ್ಟ್ನಲ್ಲಿ ಪೊಲೀಸರ ಜಾಮೀನು ಅರ್ಜಿ ವಜಾ ಆಗಿದೆ. ಆದರೂ ಅಧಿಕಾರಿಗಳು ಯಾರನ್ನೂ ಬಂಧಿಸಿಲ್ಲ. ಈ ಎಲ್ಲಾ ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.