ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಆಶ್ವಾಸನೆ ಬಳಿಕ ದಲಿತ ಪರ ಸಂಘಟನೆಗಳ ಬೃಹತ್ ಪ್ರತಿಭಟನಾ ಜಾಥಾ ಅಂತ್ಯ ಕಂಡಿದೆ. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ. ಕೆ.ಆರ್.ಅಂಬೇಡ್ಕರ್ ಭಾವಚಿತ್ರ ತೆಗೆಸಿ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವಮಾನ ಮಾಡಿದ್ದ ಆರೋಪ ಸಂಬಂಧ, ಅವರನ್ನು ವಜಾ ಮಾಡಿ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ವಿವಿಧ ದಲಿತಪರ ಸಂಘಟನೆಗಳು ಮತ್ತು ಎಸ್ಡಿಪಿಐ ಕಾರ್ಯಕರ್ತರು ನಗರದಲ್ಲಿಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ದಲಿತಪರ ಸಂಘಟನೆಗಳ ಮತ್ತು ಎಸ್ಡಿಪಿಐ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಸಮಾವೇಶಗೊಂಡು ಆನಂದರಾವ್ ವೃತ್ತದ ಮೇಲ್ಸೇತುವೆ ಮೂಲಕ ಬೃಹತ್ ಕಾಲ್ನಡಿಗೆ ಜಾಥಾ ನಡೆಸಿದರು. ಮೆರವಣಿಗೆಯಿಂದ ನಗರದಲ್ಲಿ ವಾಹನ ಸಂಚಾರಕ್ಕೆ ಸಾಕಷ್ಟು ಅಡಚಣೆಯಾಯಿತು. ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅಂಬೇಡ್ಕರ್ ಭಾವಚಿತ್ರ ತೆಗೆಯಿಸಿ ಜನತೆಗೆ, ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಅವರನ್ನು ವಜಾಗೊಳಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.