ಬೆಂಗಳೂರು: ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಕೆಸಿ ತಂಡ ಯು ಮುಂಬಾ ವಿರುದ್ಧ 41-27 ಅಂತರದಲ್ಲಿ ಜಯ ಗಳಿಸುವ ಮೂಲಕ ವಿವೋ ಪ್ರೋ ಕಬಡ್ಡಿ ಲೀಗ್‌ನ 9ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಜಯದ ಅಭಿಯಾನ ಆರಂಭಿಸಿದೆ.
ವಿವೋ ಪ್ರೋ ಕಬಡ್ಡಿ ಲೀಗ್‌ನ 9ನೇ ಆವೃತ್ತಿಗೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಭವ್ಯ ಚಾಲನೆ ಸಿಕ್ಕಿತು. ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಕೆಸಿ ಹಾಗೂ ಎರಡನೇ ಆವೃತ್ತಿಯ ಚಾಂಪಿಯನ್ ಯು ಮುಂಬಾ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾದವು.
ನವೀನ್ ಎಕ್ಸ್‌ಪ್ರೆಸ್ ಖ್ಯಾತಿಯ ನವೀನ್ ದಬಾಂಗ್ ಡೆಲ್ಲಿ ತಂಡದ ನಾಯಕನಾಗಿ ಅಂಗಣಕ್ಕಿಳಿದರು. ಡೆಲ್ಲಿ ತಂಡದಲ್ಲಿ ಸಾಮಾನ್ಯ ಆಟಗಾರನಾಗಿ ಮಿಂಚಿದ್ದ ನವೀನ್ ಈ ಬಾರಿ ನಾಯಕನಾಗಿ ಅಂಗಣದಲ್ಲಿ ಕಾಣಿಸಿಕೊಂಡರು. ಯು ಮುಂಬಾ ತಂಡದ ನಾಯಕರಾಗಿ ಸುರೇಂದರ್ ಸಿಂಗ್ ತಂಡವನ್ನು ಮುನ್ನಡೆಸಿದರು.
ಟಾಸ್ ಗೆದ್ದ ಯು ಮುಂಬಾ ರೈಡಿಂಗ್ ಆಯ್ಕೆಮಾಡಿಕೊಂಡಿತು. ಕರ್ನಾಟಕದ ರಿಯಾಲಿಟಿ ಶೋನಲ್ಲಿ ಜನಮನ ಗೆದ್ದ ಪುಟ್ಟ ತಾರೆ ವಂಶಿಕ ಅಂಜನಿ ಕಶ್ಯಪ್ ರಾಷ್ಟ್ರಗೀತೆಯನ್ನು ಹಾಡಿದ್ದು ಆರಂಭಕ್ಕೆ ಮೆರುಗು ನೀಡಿದಂತಿತ್ತು.
ನಾಯಕ ನವೀನ್ ಜವಾಬ್ದಾರಿಯುತ ಆಟ:ನಾಯಕ ನವೀನ್ ರೈಡಿಂಗ್‌ನಲ್ಲಿ 13 ಅಕಂಗಳನ್ನು ಗಳಿಸಿ ಜವಾಬ್ದಾರಿಯುತ ಆಟ ಆಡುವ ಮೂಲಕ ದಬಾಂಗ್ ಡೆಲ್ಲಿ ಪ್ರಥಮ ಹಾಗೂ ದ್ವಿತಿಯಾರ್ಧದಲ್ಲಿ ಪಂದ್ಯ ಮೇಲೆ ಹಿಡಿತ ಸಾಧಿಸಿತ್ತು. ಚೊಚ್ಚಲ ಪ್ರೋ ಕಬಡ್ಡಿ ಲೀಗ್ ಆಡುತ್ತಿರುವ ಆಶು ಮಲಿಕ್ 7 ಅಂಕಗಳನ್ನು ಗಳಿಸಿ ತಾನೊಬ್ಬ ಭವಿಷ್ಯದ ತಾರೆ ಎಂಬುದನ್ನು ಸಾರಿದರು. ವಿಶಾಲ್, ಕಿಶನ್ ಹಾಗೂ ಸಂದೀಪ್ ತಲಾ 4 ಅಂಕಗಳನ್ನು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.
ನವೀನ್ ಎಕ್ಸ್‌ಪ್ರೆಸ್ ಖ್ಯಾತಿಯ ನಾಯಾಕ:ನವೀನ್ ಎಕ್ಸ್‌ಪ್ರೆಸ್ ಎಂದೇ ಖ್ಯಾತಿ ಪಡೆದಿರುವ ದಬಾಂಗ್ ಡೆಲ್ಲಿ ತಂಡದ ನಾಯಕ ನವೀನ್ ಪ್ರೋ ಕಬಡ್ಡಿ ಲೀಗ್ ಇತಿಹಾಸಲ್ಲಿ 43ನೇ ಬಾರಿಗೆ ಸೂಪರ್ 10 ಅಂಕಗಳನ್ನು ಗಳಿಸಿದ ಸಾಧನೆ ಮಾಡಿದರು.