ಬೆಂಗಳೂರು:ಇತ್ತೀಚೆಗೆ ವಿಶಾಖಪಟ್ಟಣಂನಲ್ಲಿ ನಡೆದ ಅನಿಲ ದುರಂತ ಇಡೀ ದೇಶವನ್ನು ಗಾಬರಿಗೊಳಿಸಿತ್ತು. ಎಲ್‌ಜಿ ಪಾಲಿಮರ್ಸ್ ಅನಿಲ ದುರಂತಕ್ಕೆ ಕಾರಣ ಲಾಕ್ಡೌನ್ ಎಂದು ಸಾಕಷ್ಟು ಜನ ವಿಶ್ಲೇಷಣೆ ಮಾಡುತ್ತಿದ್ದಾರೆ ಎಂದು ಎಫ್ಕೆಸಿಸಿಐ ಮಾಜಿ ಅಧ್ಯಕ್ಷ ಡಿ ಮುರಳೀಧರ್ ಹೇಳಿದರು.
ಎಫ್ಕೆಸಿಸಿಐ ಮಾಜಿ ಅಧ್ಯಕ್ಷ ಡಿ ಮುರಳೀಧರ್ ಲಾಕ್ಡೌನ್ ಇಂತಹ ದುರಂತಕ್ಕೆ ಕಾರಣವಾದರೆ ಇನ್ನು ಒಂದು ವಾರದಲ್ಲಿ ಕೈಗಾರಿಕೆಗಳು ಪ್ರಾರಂಭವಾಗಲು ಸಜ್ಜಾಗುತ್ತಿವೆ. ಹಾಗಾದರೆ ಕೈಗಾರಿಕೆಗಳ ಅವಘಡ ತಡೆಯುವ ಜವಾಬ್ದಾರಿ ಸರ್ಕಾರ ಹಾಗೂ ಕಾರ್ಖಾನೆಗಳದ್ದು. ರಾಸಾಯನಿಕ ಹಾಗೂ ಬಾಯ್ಲರ್ ಇರುವ ಕೈಗಾರಿಕೆಗಳು ಯಾವುದೇ ಸಂದರ್ಭದಲ್ಲೂ ದುರಂತಗಳು ನಡೆಯದ ರೀತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರ ಕೂಡ ಅಷ್ಟೇ ಜವಾಬ್ದಾರಿ ವಹಿಸಿ ಪ್ರತಿಯೊಂದು ಕಾರ್ಖಾನೆ ಪರಿಶೀಲನೆ ಮಾಡಬೇಕು ಎಂದು ಹೇಳಿದರು.
ವಿಶಾಖಪಟ್ಟಣಂ ಅನಿಲ ದುರಂತದ ನಂತರ ಕೇಂದ್ರ ಸರ್ಕಾರ ಕೈಗಾರಿಕೆಗಳಿಗೆ ಕೆಲ ಮಾರ್ಗಸೂಚಿಯನ್ನು ನೀಡಿತು. ಆದರೆ ರಾಜ್ಯ ಸರ್ಕಾರ ಆ ಮಾರ್ಗಸೂಚಿಯನ್ನು ಅನುಷ್ಠಾನಗೊಳಿಸಲು ವಿಫಲವಾಗಿದೆ. ಲಾಕ್ಡೌನ್ ಮುಗಿಯಲು ಇನ್ನು ಕೆಲವೇ ದಿನಗಳು ಇದ್ದರೂ ಕಾರ್ಖಾನೆಗಳ ಸುರಕ್ಷತೆ ಪರಿಶೀಲನೆಗೆ ಯಾವುದೇ ಅಧಿಕಾರಿಗಳನ್ನು ಸರ್ಕಾರ ನೇಮಕ ಮಾಡಿಲ್ಲ. ಉದ್ಯಮಿದಾರರು ಸುಮಾರು 40 ದಿನಗಳ ಮೇಲೆ ತಮ್ಮ ವ್ಯಾಪಾರ ವಹಿವಾಟು ನಿಂತಿರುವ ಕಾರಣದಿಂದ ಕೈಗಾರಿಕೆಗಳನ್ನು ಪ್ರಾರಂಭಿಸುವ ಧಾವಂತದಲ್ಲಿದ್ದಾರೆ. ಈ ಧಾವಂತದಲ್ಲಿ ಒಂದು ಸಣ್ಣ ತಪ್ಪು ಆದರೂ ಅನಿಲ ಸೋರಿಕೆ ಹಾಗೂ ಇನ್ನಿತರ ಅವಘಡಗಳಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು.
ಸರ್ಕಾರಗಳು ಲಾಕ್ಡೌನ್ನಿಂದ ಉಂಟಾಗಿರುವ ಆರ್ಥಿಕ ನಷ್ಟ ತುಂಬುವುದಕ್ಕೆ ನಿಯಮಗಳ ಸಡಿಲಿಕೆ ಕ್ರಮವನ್ನು ಅನುಸರಿಸುತ್ತಿದೆ. ಆದರೆ ಮುಂದಾಗುವ ಜೀವದ ಹಾನಿಯ ಬಗ್ಗೆ ಯಾವುದೇ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಸರ್ಕಾರ ಕೂಡಲೇ ಕಾರ್ಖಾನೆಗಳು ಪ್ರಾರಂಭವಾಗುವ ಮುನ್ನ ರಾಸಾಯನಿಕ ಉತ್ಪಾದನೆ ಮಾಡುತ್ತಿರುವ ಕೈಗಾರಿಕೆಗಳಿಗೆ ಅಧಿಕಾರಿಗಳನ್ನು ನೇಮಿಸಿ ತಪಾಸಣೆ ಮಾಡಬೇಕು ಹಾಗೂ ವ್ಯವಸ್ಥಿತ ರೂಪದಲ್ಲಿ ಮಾತ್ರ ಕೈಗಾರಿಕೆಗಳನ್ನು ಪ್ರಾರಂಭಿಸಲು ಸರ್ಕಾರ ನಿರ್ದೇಶಿಸಬೇಕು ಎಂದು ನಾವು ಭಾರತೀಯರು ಸಂಘದ ಸದಸ್ಯ ವಿನಯ್ ಶ್ರೀನಿವಾಸ ತಿಳಿಸಿದರು.