ಬೆಂಗಳೂರು :ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಇಂದು ರಾತ್ರಿ 10 ಗಂಟೆಗೆ ಭೇಟಿ ನೀಡಿ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಆದಿಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಡಿಕೆಶಿ ಇಂದು ದಿನವಿಡೀ ರಾಮನಗರ ಜಿಲ್ಲೆಯ ವಿವಿಧ ದೇವಾಲಯ ಹಾಗೂ ಮಠಗಳಿಗೆ ಭೇಟಿ ಕೊಟ್ಟು ದೇವರ ದರ್ಶನ ಪಡೆದು ಹಾಗೂ ಶ್ರೀಗಳಿಂದ ಆಶೀರ್ವಾದ ಸ್ವೀಕರಿಸಿದ ಡಿಕೆಶಿ ಸಂಜೆ ನಗರಕ್ಕೆ ಆಗಮಿಸಿದ್ದು ರಾತ್ರಿ ವಿಜಯನಗರಕ್ಕೆ ತೆರಳಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ವಾಪಸ್ಸಾದರು.
ಪತ್ನಿ ಉಷಾ ಅವರೊಂದಿಗೆ ತೆರಳಿದ ಡಿಕೆಶಿ ಕೆಲಕಾಲ ಶ್ರೀಗಳೊಂದಿಗೆ ಸಮಾಲೋಚನೆ ನಡೆಸಿದರು. ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರಾಗಿರುವ ಡಿಕೆಶಿ ಇದೇ ಸಮುದಾಯದ ಪ್ರಮುಖ ಮಠಾಧಿಪತಿಯಾಗಿ ಇರುವ ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿಯಾಗಿ ಚರ್ಚಿಸಿದ್ದು ಪ್ರಮುಖ ಬೆಳವಣಿಗೆಯಾಗಿ ಗೋಚರಿಸಿದೆ.
ಕಳೆದ ಮೂರು ದಿನಗಳ ಹಿಂದೆ ನಗರಕ್ಕೆ ಆಗಮಿಸಿರುವ ಡಿ.ಕೆ ಶಿವಕುಮಾರ್ ನಿರಂತರವಾಗಿ ಸಂಚರಿಸುತ್ತಿದ್ದು ವಿವಿಧ ಮಠಗಳು ಹಾಗೂ ದೇವಾಲಯಗಳ ಜೊತೆಗೆ ಹಲವು ರಾಜಕೀಯ ಮುಖಂಡರನ್ನು ಭೇಟಿಯಾಗಿ ಚರ್ಚಿಸುತ್ತಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಜಾರಿ ನಿರ್ದೇಶನಾಲಯ ಬಳಸಿಕೊಂಡು ತಮ್ಮ ಮೇಲೆ ಅನಗತ್ಯ ಒತ್ತಡ ಹೇರುವ ಕಾರ್ಯವನ್ನು ಮಾಡುತ್ತಿದೆ ಎಂದು ಹಲವರ ಬಳಿ ಅವರು ನೋವು ತೋಡಿಕೊಂಡಿದ್ದಾರೆ. ಅನಾರೋಗ್ಯ ಕೂಡ ಕಾಡುತ್ತಿದ್ದು ಮುಂದಿನ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯುವುದಾಗಿ ಅವರು ಹೇಳಿಕೊಂಡಿದ್ದಾರೆ. ಇಂದು ಕೂಡ ಶ್ರೀಗಳನ್ನು ಭೇಟಿಯಾದ ಸಂದರ್ಭ ತಮಗೆ ಎದುರಾಗಿರುವ ಆತಂಕ ಹಾಗೂ ಸಮಸ್ಯೆಯ ಕುರಿತು ಅವರು ಚರ್ಚಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.