ಜೈಪುರ/ಬೆಂಗಳೂರು: ಕೋವಿಡ್ನಿಂದ ಚೇತರಿಸಿಕೊಂಡಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೈಪುರದಲ್ಲಿ ಮಂಗಳವಾರ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.
ವಿಶೇಷ ವಿಮಾನದ ಮೂಲಕ ಇಂದು ಬೆಳಗ್ಗೆ ಜೈಪುರ ತಲುಪಿರುವ ಡಿಕೆಶಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಆರೋಗ್ಯ ವಿಚಾರಿಸುವ ಜತೆಗೆ ರಾಜಸ್ಥಾನ ರಾಜಕೀಯ ಗೊಂದಲಗಳ ಕುರಿತು ಸಹ ಮಾತುಕತೆ ನಡೆಸಿದ್ದಾರೆ.
ಯಾವುದೇ ಕಾರಣಕ್ಕೂ ಇಲ್ಲಿನ ಸರ್ಕಾರ ಬೀಳದಂತೆ ತಾವು ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಗುಜರಾತ್ನಲ್ಲಿ ಕಾಂಗ್ರೆಸ್ಗೆ ಆತಂಕ ಎದುರಾದಾಗ, ಅಲ್ಲಿನ ಶಾಸಕರನ್ನು ತಮ್ಮ ರಾಜ್ಯಕ್ಕೆ ಕರೆಸಿಕೊಂಡಿದ್ದ ಡಿಕೆಶಿ, ಯಾವುದೇ ಸಂದರ್ಭದಲ್ಲೂ ತಾವು ರಾಜಸ್ಥಾನ ಸರ್ಕಾರ ಭದ್ರವಾಗಿಸಲು ಸಹಕಾರಕ್ಕೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ.
ರಾಜಸ್ಥಾನ ರಾಜಕೀಯದಲ್ಲಿ ಇತ್ತೀಚೆಗೆ ಗೊಂದಲಗಳು ಹೆಚ್ಚಾಗಿವೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಯುವ ನಾಯಕ ಸಚಿನ್ ಪೈಲಟ್ ನಡುವೆ ಅಂತರ ಹೆಚ್ಚಾಗುತ್ತಿದೆ. ಈ ಹಿಂದೆಯೂ ಒಮ್ಮೆ ಪಕ್ಷ ಇಬ್ಭಾಗಗವಾಗುವ ಹಂತವನ್ನು ತಲುಪಿ ಕ್ಷಣಗಳಲ್ಲಿ ರಾಷ್ಟ್ರೀಯ ನಾಯಕರ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಬಗೆಹರಿದಿತ್ತು. ಇದೀಗ ರಾಜಸ್ಥಾನ ಕಾಂಗ್ರೆಸ್ನಲ್ಲಿ ಸಮಸ್ಯೆ ಮತ್ತೆ ಉಲ್ಬಣಗೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.