ಬೆಂಗಳೂರು: ವಿಧಾನಸಭೆ ಉಪ ಚುನಾವಣೆ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ನಿರುದ್ಯೋಗ ಸಮಸ್ಯೆಗೆ ಪರಿಹಾರೋಪಾಯ ಸೂಚಿಸಿದ್ದಾರೆ. ಚುನಾವಣಾ ಪ್ರಚಾರದ ಮಧ್ಯೆ ಟ್ವೀಟ್ ಮಾಡಿರುವ ಅವರು, ಈ ಮೂಲಕ ಯುವಕರಿಗೆ ನಿರುದ್ಯೋಗ ನಿವಾರಣೆಗೆ ಉಪಾಯವೊಂದನ್ನು ನೀಡಿದ್ದಾರೆ. ಜನ ತಾವು ಸೂಚಿಸುವ ಮಾರ್ಗ ಅನುಸರಿಸಿ ಹಣ ಗಳಿಸಬಹುದು ಎಂದು ತಿಳಿಸಿದ್ದಾರೆ.
ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗೋದನ್ನ ನೋಡ್ತಿದ್ದೀರಿ. ಹಾಗಾಗಿ, ಇವತ್ತು ಪೆಟ್ರೋಲ್ ಕೊಂಡು ಸ್ವಲ್ಪ ದಿನಗಳ ನಂತರ ಮಾರಾಟ ಮಾಡಿದ್ರೆ ನಿಮಗೆ ಲಾಭವಾಗಬಹುದು. ಮುಂದೊಂದು ದಿನ ಪೆಟ್ರೋಲ್ ಬೆಲೆ 200 ರೂಪಾಯಿ ತಲುಪಿದ್ರೆ ನಿಮ್ಮ ಜೇಬಲ್ಲಿ ಎಷ್ಟು ಹಣ ಇರಬಹುದು? ನೀವೇ ಊಹಿಸಿ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಇಂಧನ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ನಿರಂತರವಾಗಿ ಆರೋಪಿಸುತ್ತಿರುವ ಡಿ. ಕೆ ಶಿವಕುಮಾರ್ ಲೇವಡಿ ಮೂಲಕ ಮತ್ತೊಮ್ಮೆ ಸರ್ಕಾರದ ಕಾಲೆಳೆಯುವ ಕಾರ್ಯ ಮಾಡಿದ್ದಾರೆ. ಪ್ರಸ್ತುತ ವಿಧಾನ ಎರಡು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಗೆ ಪ್ರಚಾರದಲ್ಲಿಯೂ ಕಾಂಗ್ರೆಸ್ ನಾಯಕರು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.
ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿಯೇ ಬೆಲೆ ಇಳಿಕೆ ಮಾಡುತ್ತಿಲ್ಲ. ಬಡ ಹಾಗೂ ಕೆಳವರ್ಗದ ಜನರಿಗೆ ಸಾಕಷ್ಟು ಸಮಸ್ಯೆ ಉಂಟಾಗಿದೆ. ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿಸುವ ಕಾರ್ಯವನ್ನು ಮಾಡುತ್ತಿದೆ. ಬೆಲೆ ಏರಿಕೆಯಿಂದಾಗಿ ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಇದರ ಜೊತೆಗೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಸುಳ್ಳು ಭರವಸೆ ನೀಡಿ ಜನರನ್ನು ಮರಳು ಮಾಡುವ ಪ್ರಯತ್ನ ಮಾಡಿದೆ. ಈ ಸರ್ಕಾರ ಬಂದ ನಂತರದ ದಿನಗಳಲ್ಲಿ ಉದ್ಯೋಗ ನಷ್ಟವಾಗಿದೆಯೇ ಹೊರತು ಸೃಷ್ಟಿಯಾಗಿಲ್ಲ ಎಂದು ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ನಿರಂತರವಾಗಿ ಆರೋಪ ಮಾಡುತ್ತಾ ಬಂದಿದ್ದಾರೆ.
ಓದಿ:ಅರ್ಧದಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್: ಶಾಸಕ ಭೈರತಿ ಸುರೇಶ್ ಪ್ರಾಣಾಪಾಯದಿಂದ ಪಾರು