ಬೆಂಗಳೂರು: ಬಿಟ್ ಕಾಯಿನ್ (Bitcoin) ವಿಚಾರದಲ್ಲಿ ಸಿಎಂ ಇಡಿಗೆ (ED) ಯಾವ ತನಿಖೆ ವಹಿಸಿದ್ದಾರೆ ಎಂಬ ಮಾಹಿತಿಯನ್ನು ಜನರ ಮುಂದಿಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಎಷ್ಟು ಬಿಟ್ ಕಾಯಿನ್ ರಿಕವರಿ ಆಗಿದೆ ಎಂಬುದರ ಮಾಹಿತಿ ಜನರ ಮುಂದಿಡಿ. ಕಾಂಗ್ರೆಸ್ ಲೀಡರ್ ಮಗನ ಹೆಸರಿದೆ ಅಂತ ಹೋಮ್ ಮಿನಿಸ್ಟರ್ ಹೇಳ್ತಾರೆ. ಯಾರೇ ಇದ್ರೂ ಅವರನ್ನ ಅರೆಸ್ಟ್ ಮಾಡಿ. ಎಷ್ಟು ಜನ ಹೆಸರು ಹೊರಬರುತ್ತೆ ಹೋಮ್ ಮಿನಿಸ್ಟರ್ಗೆ ಗೊತ್ತಿದೆಯಾ?. ಆಫಿಸರ್ಸ್ ಎಷ್ಟು ಜನ ಇದ್ದಾರೆ ಗೊತ್ತಾ? ಏಕೆ ಹೋಮ್ ಮಿನಿಸ್ಟರ್ ಆಫಿಸರ್ಸ್ ರಕ್ಷಣೆ ಮಾಡ್ತಿದ್ದಾರೆ? ಎಂದು ಪ್ರಶ್ನಿಸಿದರು.
ಬಿಟ್ ಕಾಯಿನ್ ಪ್ರಕರಣದಲ್ಲಿ ಮುಖ್ಯಮಂತ್ರಿ ತಲೆದಂಡವಾಗುತ್ತದೆ ಎಂಬ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬಿಟ್ ಕಾಯಿನ್ ಹಗರಣದಲ್ಲಿ ಪಕ್ಷದ ನಿರ್ಧಾರವನ್ನು ನಾನು ಈಗಾಗಲೇ ಹೇಳಿದ್ದೇನೆ. ಪ್ರಕರಣದ ತನಿಖೆಯಾಗಿದೆ. ಇದನ್ನು ಇ.ಡಿಗೆ ಹಸ್ತಾಂತರಿಸಲಾಗಿದೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ.
ಅವರು ನಡೆಸಿರುವ ತನಿಖೆ ಏನು? ಸಿಕ್ಕಿರುವ ಮಾಹಿತಿ ಏನು? ಏನೆಲ್ಲಾ ಸೀಜ್ ಮಾಡಿದ್ದಾರೆ? ಸೀಜ್ ಮಾಡಿಕೊಂಡ ಬಿಟ್ ಕಾಯಿನ್ ಯಾರ ವಾಲೆಟ್ ನಲ್ಲಿದೆ? ಹಗರಣದಲ್ಲಿ ಯಾರ ಹೆಸರು ಕೇಳಿಬಂದಿದೆ? ಇ.ಡಿ. ತನಿಖೆ ಸಂಬಂಧ ಪ್ರಧಾನಿಗಳಿಗೆ ಪತ್ರ ಬರೆದಿದ್ದು ಯಾರು? ಪೊಲೀಸ್ ಅಧಿಕಾರಿಗಳ ಹೇಳಿಕೆಗಳೇನು? ಎಷ್ಟು ಎಫ್ಐಆರ್ ದಾಖಲಾಗಿದೆ? ಎಂದು ಸರ್ಕಾರ ಮೊದಲು ಮಾಹಿತಿ ನೀಡಲಿ ಎಂದರು.
ಯಾವುದೋ ಗಲಾಟೆಯಲ್ಲಿ ಕಾಂಗ್ರೆಸ್ ನಾಯಕರ ಜತೆ ಆತ ಗುರುತಿಸಿಕೊಂಡಿದ್ದ ಎಂದು ಹೇಳುತ್ತಾರೆ?. ಆ ಪ್ರಕರಣದಲ್ಲಿ ಏನಾಗಿತ್ತು? ಈಗ ಏನಾಗಿದೆ? ಎಂದು ಸರ್ಕಾರವೇ ಹೇಳಬೇಕು. ಮಾಧ್ಯಮಗಳಲ್ಲಿ ಯಾರ ಹೆಸರು ಹೇಳದೆಯೇ ಅನೇಕ ವಿಚಾರಗಳನ್ನು ವರದಿ ಮಾಡಲಾಗುತ್ತಿದೆ. ಹೀಗಾಗಿ, ನಾನು ಬೇರೆ ನಾಯಕರ ವೈಯಕ್ತಿಕ ಅಭಿಪ್ರಾಯದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಈ ವಿಚಾರವಾಗಿ ನಾನು, ನಮ್ಮ ನಾಯಕರು ಮಾಹಿತಿ ಕಲೆಹಾಕುತ್ತಿದ್ದೇವೆ. ಮೊದಲು ಸರ್ಕಾರ ತನ್ನ ಬಳಿ ಇರುವ ಮಾಹಿತಿಯನ್ನು ನೀಡಲಿ. ನಾವು ವಿರೋಧ ಪಕ್ಷವಾಗಿ ನಮ್ಮ ಮಾಹಿತಿಯನ್ನು ಜನರ ಮುಂದೆ ಇಡುತ್ತೇವೆ. ನ್ಯಾಯಾಲಯಕ್ಕೆ ಮಾಹಿತಿ, ದಾಖಲೆ ಒದಗಿಸಬೇಕಾದ ಜವಾಬ್ದಾರಿ ಸರ್ಕಾರದ್ದು ಎಂದರು.
ಸಿ.ಟಿ.ರವಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಅಧಿಕಾರದಲ್ಲಿಲ್ಲ. ಅಧಿಕಾರದಲ್ಲಿದ್ದಿದ್ದರೆ ಇಷ್ಟು ಹೊತ್ತಿಗೆ ಎಲ್ಲ ಮಾಹಿತಿ ಬಹಿರಂಗಪಡಿಸುತ್ತಿದ್ದೆ. ಕಾಂಗ್ರೆಸ್ ನಾಯಕರ ಮಗನ ವಿಚಾರ ಮಾತನಾಡುವುದಾದರೆ, ಆತ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಆತನನ್ನು ಬಂಧಿಸಲಿ. ಯಾವ ಆಧಾರದ ಮೇಲೆ ಕಾಂಗ್ರೆಸ್ ನಾಯಕರ ಮಕ್ಕಳ ಹೆಸರು ತರುತ್ತಿದ್ದಾರೆ. ತಪ್ಪು ಮಾಡಿದವರನ್ನು ಸುಮ್ಮನೆ ಬಿಡುವುದೇಕೆ? ಎಂದು ಪ್ರಶ್ನಿಸಿದರು.
ನಮಗೆ ಈಗ ಬಂದಿರುವುದು ಪೊಲೀಸ್ ಇಲಾಖೆ ಹಾಗೂ ಬಿಜೆಪಿ ನಾಯಕರು, ಅಧಿಕಾರಿಗಳು ಕೊಟ್ಟಿರುವ ಹಿಂಬಾಗಿಲಿನ ಮಾಹಿತಿ. ಹೀಗಾಗಿ, ಅಧಿಕಾರದಲ್ಲಿರುವ ಬಿಜೆಪಿ ನ್ಯಾಯಾಲಯಕ್ಕೆ ದಾಖಲೆ ನೀಡಲಿ, ಜನರ ಮುಂದೆ ಬಹಿರಂಗಪಡಿಸಲಿ ಎಂದರು.