ಬೆಂಗಳೂರು :ಸಚಿವ ಆನಂದ್ ಸಿಂಗ್ ಇಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸಿದರು. ಕೆಪಿಸಿಸಿ ಅಧ್ಯಕ್ಷರ ಸದಾಶಿವನಗರ ನಿವಾಸಕ್ಕೆ ಭೇಟಿ ಕೊಟ್ಟ ಸಚಿವ ಆನಂದ್ ಸಿಂಗ್ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.
ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರು, ಮೇಕೆದಾಟು ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದಾರೆ. ನಾನು ಕಾಂಗ್ರೆಸ್ ಪಕ್ಷದ ಸೀನಿಯರ್ ಲೀಡರ್. ಹೀಗಾಗಿ, ಬಂದು ಭೇಟಿ ಮಾಡಿದ್ದಾರೆ ಅಷ್ಟೇ.. ಮನೆಯಲ್ಲಿ ನಾನು ರಾಜಕಾರಣ ಮಾಡಲ್ಲ. ರಾಜಕಾರಣ ಮಾಡೋ ರೀತಿ ಇದ್ರೆ ಹೊರಗಡೆ ಮಾಡ್ತೀನಿ. ಹೊರಗಡೆ ಹೋಟೆಲ್‌ಗಳಲ್ಲಿ ಮಾಡುತ್ತೇನೆ ಎಂದರು.
ಆನಂದ್ ಸಿಂಗ್ ನನ್ನ ಮನೆಗೆ ಬಂದಿದ್ದಕ್ಕೂ ರಾಜಕೀಯಕ್ಕೂ ಸಂಬಂಧ ಇಲ್ಲ. ನಾವು ರಾಜಕೀಯ ಮಾತಾಡೋದಿದ್ದರೆ ರೆಸಾರ್ಟ್ಗಳಲ್ಲಿ, ಹೋಟೆಲ್‌ಗಳಲ್ಲಿ ಮಾಡ್ತೇವೆ. ಇಲ್ಲಿ ಮನೆಯಲ್ಲಿ ನೇರವಾಗಿ ಬಂದು ಅದೆಲ್ಲ ಮಾತಾಡೊಲ್ಲ. ಆ ಕಾಮನ್ ಸೆನ್ಸ್ ನಮಗೂ ಇರಬೇಕು, ನಿಮಗೂ ಇರಬೇಕು. ಆನಂದ್ ಸಿಂಗ್ ಭೇಟಿ ಹಿಂದಿನ ರೆಕ್ಕೆ ಪುಕ್ಕ ಕಟ್ಟುವ ಅಗತ್ಯ ಇಲ್ಲ ಎಂದು ಖಾರವಾಗಿ ಉತ್ತರಿಸಿದರು.
ಸಂಗಮದಲ್ಲಿ ಕಾವೇರಿ ಆರತಿ ಮಾಡಬೇಕು. ಕ್ಷೇತ್ರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕು. ಈ ವಿಚಾರಕ್ಕೆ ನಾನು ಆನಂದ್ ಸಿಂಗ್ ಬಳಿ ಮನವಿ ಮಾಡಿದ್ದೇನೆ. ಅವರು ಸಹ ಸ್ಪಂದಿಸಿದ್ದಾರೆ. ಒಂದು ಟೀಮ್ ಕಳಿಸುತ್ತೇನೆ ಎಂದು ಹೇಳಿದ್ದಾರೆ. ನಾವು ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕಿದೆ. ಅವರು ಸ್ಪಂದಿಸಿದ್ದಾರೆ. ಅವರು ಒಬ್ಬ ಮಂತ್ರಿ ಇದ್ದಾರೆ. ಮನೆಗ ಬರಬೇಕು ಅಂದ್ರೆ ರಾಜಕಾರಣ ಇಟ್ಟುಕೊಂಡು ಬರಲ್ಲ ಎಂದರು.
ನಾಳೆ ಕೇಂದ್ರ ಸರ್ಕಾರದ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿ, ದೇಶದಲ್ಲಿ ಕೋವಿಡ್ನಿಂದ ನರಳಿದ ಜನರಿಗೆ ಸರ್ಕಾರ ಯಾವ ರೀತಿ ಸಹಾಯ ಮಾಡುತ್ತೆ ಎಂದು ನಿರೀಕ್ಷೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ ನಾಲ್ಕು ಲಕ್ಷ ಜನ ಮೃತಪಟ್ಟಿದ್ದಾರೆ. ಅವರಿಗೆ ಯಾವ ರೀತಿ ಸಹಾಯ ಮಾಡುತ್ತದೆ. ಕೆಲವರಿಗೆ ಸೀಮಿತವಾಗಿ ಒಂದೊಂದು ಲಕ್ಷ ಕೊಡುವುದಕ್ಕೆ ಮುಂದಾಗಿದ್ದಾರೆ. ನಾಲ್ಕು ಲಕ್ಷ ಕೊಡಬೇಕು ಎಂದು ನಾವು ಒತ್ತಾಯ ಮಾಡಿದ್ದೆವು. ಕೋರ್ಟ್ ಸಹ ಹೇಳಿತ್ತು. ರೈತರಿಗೆ, ಕಾರ್ಮಿಕರಿಗೆ ನಷ್ಟವಾಗಿದೆ. ಅನೇಕ ಜನ ಕೆಲಸ ಕಳೆದುಕೊಂಡಿದ್ದಾರೆ. ಇವರೆಲ್ಲರ ಪಟ್ಟಿ ಸಿದ್ದಪಡಿಸಿ, ಅವರಿಗೆ ಹಣ ಕೊಡುತ್ತದೆ ಎಂದು ನಂಬಿಕೆಯಿದೆ ಎಂದು ಹೇಳಿದರು.
ಸಿಎಂ ಇಬ್ರಾಹಿಂ ಹಾಗೂ ಎಸ್. ಆರ್ ಪಾಟೀಲ್ ಭೇಟಿ ವಿಚಾರ ಮಾತನಾಡಿ, ಎಸ್. ಆರ್ ಪಾಟೀಲ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಅವರು ದಡ್ಡರಲ್ಲ, ಯಾರದ್ದೋ ಒಬ್ಬ ಅಧಿಕಾರದ ಆಮಿಷಕ್ಕೆ ಒಳಗಾಗಿ ಚರ್ಚೆ ಮಾಡಲ್ಲ. ಅವರಿನ್ನೂ ರಾಜೀನಾಮೆ ಕೊಟ್ಟಿಲ್ಲ. ನಮ್ಮ ಪಕ್ಷದಲ್ಲೇ ಇದ್ದಾರೆ. ಗೌರವದಿಂದ ಮಾತಾಡುವುದರಲ್ಲಿ ತಪ್ಪೇನು ಇಲ್ಲ. ಇದರಲ್ಲಿ ರಾಜಕಾರಣವಿಲ್ಲ ಎಂದು ಪರೋಕ್ಷವಾಗಿ ಸಿಎಂ ಇಬ್ರಾಹಿಂಗೆ ಟಾಂಗ್ ಕೊಟ್ಟರು.
ಓದಿ:ಸಿ.ಎಂ.ಇಬ್ರಾಹಿಂ ಪಕ್ಷದಲ್ಲೇ ಇರ್ತಾರೆ: ಯುಟಿ ಖಾದರ್ ವಿಶ್ವಾಸ