ಬೆಂಗಳೂರು: ಹಣ್ಣು ತಿಂದವನು ಯಾವನೋ?, ಸಿಪ್ಪೆ ತಿಂದವನು ಯಾವನೋ? ಬಾಯಿ-ಮೂತಿಗೆ ಒರೆಸಿದವನು ಯಾವನೋ ಎಂದು ಬಿಜೆಪಿ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President D. K. Shivakumar) ಟಾಂಗ್ ನೀಡಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದವರನ್ನು ಡ್ಯಾಮೇಜ್ ಮಾಡಲು ನೋಡ್ತಾ ಇದ್ದಾರೆ. ಆದರೆ, ಯಾರನ್ನೂ ಡ್ಯಾಮೇಜ್ ಮಾಡಲು ಸಾಧ್ಯವಿಲ್ಲ. ನಮಗೂ ಮಾಹಿತಿ ಇದೆ. ಸೂಕ್ತ ಸಮಯದಲ್ಲಿ ಮಾತನಾಡುತ್ತೇವೆ ಎಂದರು.
ಕಾಂಗ್ರೆಸ್ ನಾಯಕರ ಮಕ್ಕಳು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಾಗಿದ್ದರೆ ಕಾಯುವುದು ಏಕೆ?, ಕೂಡಲೇ ಬಂಧಿಸಿ. ಸಮಯ ಏಕೆ ವ್ಯಯ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.
ಸಿಎಂ ದೆಹಲಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಿಎಂ ಏತಕ್ಕೆ ಹೋದರೋ ಗೊತ್ತಿಲ್ಲ. ಅವರ ಪಕ್ಷದ ಸಚಿವರುಗಳೇ ಸಿಎಂ ಬಗ್ಗೆ ಹೇಳ್ತಿದ್ದಾರೆ. ಅದರ ಬಗ್ಗೆ ನಾನು ಮಾತನಾಡಲ್ಲ ಎಂದರು.
ಬಿಟ್‌ಕಾಯಿನ್ ಪ್ರಕರಣದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಅಂತ ಪ್ರಧಾನಿ ಹೇಳಿದ್ದಾರೆಂಬ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಹಳ ಸಂತೋಷ. ಹಾಗಿದ್ದರೆ ಸಿಎಂ ಪ್ರಧಾನಿ ಮುಂದೆ ಏಕೆ ವಿಷಯ ಪ್ರಸ್ತಾಪಿಸಿದರು?. ಯಾರಿಗಾದರೂ ತೊಂದರೆ ಆಗಿತ್ತಾ?. ಹಗರಣದಲ್ಲಿ ವಿಚಾರ ಏನಿದೆ ಅಂತ ಸಿಎಂ ಬಿಚ್ಚಿಡಲಿ. ಹೇಳೋದು ಉಳಿದದ್ದು, ಹೇಳದೇ ಇರೋದು ಮಾಡಬಾರದು. ಏನಿದೆ ಎಂಬ ವಿಚಾರವನ್ನು ಜನರ ಮುಂದೆ ಬಿಚ್ಚಿಡಲಿ. ಜನರಿಗೆ ಸತ್ಯಾಂಶ ಗೊತ್ತಾಗಬೇಕು ಎಂದು ತಿಳಿಸಿದರು.