ಕರ್ನಾಟಕ

karnataka

ETV Bharat / state

ಬಿಜೆಪಿಯು ಒಕ್ಕೂಟ ವ್ಯವಸ್ಥೆ ನಾಶ ಮಾಡಲು ಹೊರಟಿದೆ: ಡಿ.ಕೆ. ಶಿವಕುಮಾರ್ ಕಿಡಿ - bangalore latest news

ಕಾಂಗ್ರೆಸ್ ಪಕ್ಷವು ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ತಂದು ಜನರಿಗೆ ಕೃಷಿ ಮಾಡಲು ಭೂಮಿ ನೀಡಿದೆ. ಅದರೆ, ಈಗಿನ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಸಣ್ಣ ರೈತರಿಗೆ ಮರಣ ಶಾಸನ ಬರೆಯುತ್ತಿದೆ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಕ್ರೋಶ ಹೊರಹಾಕಿದರು.

D K Shivakumar spark against BJP
ಡಿ.ಕೆ ಶಿವಕುಮಾರ್

By

Published : Jun 24, 2020, 4:41 AM IST

ಬೆಂಗಳೂರು: ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿರುವ ಕಾಯ್ದೆಗಳ ಬದಲಾವಣೆಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ರವಾನಿಸಿದ್ದು, ಇದು ಒಕ್ಕೂಟ ವ್ಯವಸ್ಥೆ ನಾಶ ಮಾಡುವ ಹುನ್ನಾರವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಜುಲೈ 2 ರಂದು ರಾಜ್ಯಾದ್ಯಂತ ನಡೆಯಲಿರುವ ಪ್ರತಿಜ್ಞಾ ದಿನ ಕಾರ್ಯಕ್ರಮ ಪೂರ್ವ ತಯಾರಿ ಕುರಿತ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಪಕ್ಷವನ್ನು ಬೂತ್ ಮಟ್ಟದಲ್ಲಿ ಕಟ್ಟುವ ಸಂಕಲ್ಪ ಕೈಗೊಂಡರು. ಜತೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಕಾಂಗ್ರೆಸ್ ಪಕ್ಷವು ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ತಂದು ಜನರಿಗೆ ಕೃಷಿ ಮಾಡಲು ಭೂಮಿ ನೀಡಿದೆ. ಅದರೆ, ಈಗಿನ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಸಣ್ಣ ರೈತರಿಗೆ ಮರಣ ಶಾಸನ ಬರೆಯುತ್ತಿದೆ. ಅದೇ ರೀತಿ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ. ಇನ್ನು ಅಂತಾರಾಷ್ಟ್ರೀಯ ಕಾರ್ಮಿಕ ಒಕ್ಕೂಟ ಹಾಗೂ ಅಧಿವೇಶನದಲ್ಲಿ ಚರ್ಚಿಸಿ ತಂದ ಕಾರ್ಮಿಕ ಕಾಯ್ದೆಯನ್ನು ಮೂರು ವರ್ಷ ರದ್ದು ಮಾಡಲು ಹೊರಟಿದ್ದಾರೆ. ಅವೈಜ್ಞಾನಿಕವಾಗಿ ಇಂಧನ ಬೆಲೆ ಏರಿಕೆಯಾಗುತ್ತಿದ್ದು, ಈ ಬಗ್ಗೆ ಯಾರೂ ಮಾತನಾಡುತ್ತಲೇ ಇಲ್ಲ. ಬೆಲೆ ಕಡಿಮೆ ಮಾಡಬೇಕಾದ ಸಮಯದಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಬೆಲೆ ಏರಿಸಿ ಕೇಂದ್ರ ಸರ್ಕಾರ ಜನ ವಿರೋಧಿ ತೀರ್ಮಾನ ಕೈಗೊಂಡಿದೆ ಎಂದು ಆರೋಪಿಸಿದರು.

ಡಿ.ಕೆ. ಶಿವಕುಮಾರ್

ಈ ಎಲ್ಲ ವಿಚಾರವಾಗಿ ನಮ್ಮ ಶಾಸಕಾಂಗ ಪಕ್ಷದ ನಾಯಕರ ಜತೆ ಚರ್ಚಿಸಿ, ಮುಂದೆ ಯಾವ ರೀತಿ ಹೋರಾಟ ಮಾಡಬೇಕು ಎಂಬುದರ ಬಗ್ಗೆ ನಿಮಗೆ ಸಂದೇಶ ರವಾನಿಸುತ್ತೇವೆ. ನಾವು ಸಂಪೂರ್ಣ ಸಹಕಾರ ನೀಡಿದರೂ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಹೃದಯ ಗೆಲ್ಲಲು ಸಾಧ್ಯವಾಗಿಲ್ಲ. ಇದೊಂದು ಯೂಟರ್ನ್ ಸರ್ಕಾರ. ಬೆಳಗ್ಗೆ ಕೊಟ್ಟ ಹೇಳಿಕೆಯನ್ನು ಸಂಜೆ ಬದಲಾಯಿಸುತ್ತದೆ. ಅಧಿವೇಶನ ಕರೆಯಲಿ ಎಲ್ಲವನ್ನು ಬಿಚ್ಚಿಡುತ್ತೇವೆ ಎಂದು ಸವಾಲು ಹಾಕಿದರು.

ನಾನಾಗಲಿ ನಮ್ಮ ನಾಯಕರಾದ ಸಿದ್ದರಾಮಯ್ಯನವರಾಗಲಿ ಏನನ್ನೂ ಹೇಳುವುದೇ ಬೇಡ, ಮಾಧ್ಯಮಗಳೇ ಎಲ್ಲವನ್ನು ನಿಮ್ಮ ಮುಂದೆ ವಿವರಿಸುತ್ತಿವೆ. ನಾವು ಸಲಹೆ ಕೊಡುತ್ತೇವೆ ಕೇಳಿ ಎಂದರೆ ನಮ್ಮ ಸಲಹೆ ಬೇಡ ಎಂದರು. ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜಕಾರಣ ಮಾಡುವುದು ಬೇಡ ಎಂದು ಸಹಕಾರ ನೀಡಿದೆವು. ನಾವು ಈ ವಿಚಾರದಲ್ಲಿ ತೋರಿದ ಹೃದಯ ಶ್ರೀಮಂತಿಕೆಯನ್ನು ಅವರು ಉಳಿಸಿಕೊಳ್ಳಲಿಲ್ಲ. ಕಡೆಗೆ ಯಾವ ಮಟ್ಟಕ್ಕೆ ಇಳಿದರು ಎಂದರೆ, ಕಾರ್ಮಿಕರಿಗೆ ನೀಡುವ ಕಿಟ್ ಅನ್ನು ತಮ್ಮ ಫೋಟೋ ಹಾಕಿಕೊಂಡು ತಮ್ಮ ಬೆಂಬಲಿಗ ಮತದಾರರಿಗೆ ಕೊಟ್ಟರು. ಬದ್ದತೆ ಮುಖ್ಯಅಧಿಕಾರ ಇಲ್ಲದಿದ್ದರೂ, ಚುನಾವಣೆಯಲ್ಲಿ ಸೋತಿದ್ದರೂ ಕಾಂಗ್ರೆಸ್ ನಾಯಕರು ರಾಜ್ಯದ ಉದ್ದಗಲಕ್ಕೂ ಸಹಾಯ ಮಾಡಿದರು ಎಂದು ಹೇಳಿದರು.

ABOUT THE AUTHOR

...view details