ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಬಯಲಿಗೆಳೆದ ಮಾಜಿ ಸಚಿವ, ಕಾಂಗ್ರೆಸ್ ವಕ್ತಾರ ಪ್ರಿಯಾಂಕ್ ಖರ್ಗೆ ಅವರಿಗೆ ಸಿಐಡಿ ನೋಟಿಸ್ ಜಾರಿ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ರಾಜ್ಯ ಬಿಜೆಪಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ‘ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರಸ್ತಂಭಗಳು ಎಂದು ತಿಳಿಸಿದರು.
ನಾವು ವಿರೋಧ ಪಕ್ಷದಲ್ಲಿದ್ದು, ರಾಜ್ಯದುದ್ದಗಲಕ್ಕೂ ಅನೇಕ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನಮಗೂ ಬೇರೆ ಬೇರೆ ಮೂಲಗಳಿಂದ ಭ್ರಷ್ಟಾಚಾರ, ಅಕ್ರಮ, ಅನ್ಯಾಯಗಳ ಬಗ್ಗೆ ಸಾಕಷ್ಟು ಮಾಹಿತಿಗಳು ಲಭ್ಯವಾಗುತ್ತವೆ. ಇಂತಹ ದೂರು, ಅಹವಾಲುಗಳನ್ನು ಸ್ವೀಕರಿಸಲು ಸಾರ್ವಜನಿಕ ಅಹವಾಲು ಸಮಿತಿಯನ್ನೇ ರಚಿಸಲಾಗಿದೆ. ಅಹವಾಲು, ಸಮಸ್ಯೆ ಹೇಳಿಕೊಂಡವರಿಗೆ ಸಹಾಯ, ಅವರ ಪರ ಧ್ವನಿ ಎತ್ತುವ ಕೆಲಸ ಮಾಡಿಕೊಂಡು ಬಂದಿದ್ದೇವೆ ಎಂದರು.
ಮೂರು ವರ್ಷದಿಂದ ಸರ್ಕಾರದ ಅನೇಕ ಭ್ರಷ್ಟಾಚಾರಗಳ ಬಗ್ಗೆ ಮಾಹಿತಿ ಬಂದಿದ್ದು, ಒಂದೊಂದೇ ವಿಚಾರವನ್ನು ನಾವು ಸರ್ಕಾರ, ಸಾರ್ವಜನಿಕರ ಗಮನಕ್ಕೆ ತರುತ್ತಿದ್ದೇವೆ. ಪಿಎಸ್ಐ ನೇಮಕ ಅಕ್ರಮ ವಿಚಾರವಾಗಿ ನಮಗೆ ಮಾಹಿತಿ ಬಂದಾಗ ಅಧಿವೇಶನದಲ್ಲಿ ನಮ್ಮ ಶಾಸಕರಿಂದ ಪ್ರಶ್ನೆ ಕೇಳಿಸಿದ್ದೆವು. ಆಗ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಯಾವುದೇ ಅಕ್ರಮ ನಡೆದಿಲ್ಲ ಎಂದು ಲಿಖಿತ ಉತ್ತರ ಕೊಟ್ಟಿದ್ದಾರೆ. ನಂತರ ಅನೇಕರು ನನ್ನನ್ನು ಭೇಟಿ ಮಾಡಿ, ಯಾರಿಗೆ ಎಷ್ಟು ಅಂಕ ಬಂದಿದೆ ಎಂದು ಉತ್ತರ ಪತ್ರಿಕೆ ತೋರಿಸಿದರು.
ಖರ್ಗೆ ನಮ್ಮ ಪಕ್ಷದ ವಕ್ತಾರರು:ಕಲಬುರ್ಗಿಗೆ ಸಂಬಂಧಿಸಿದ ಅಕ್ರಮದ ಬಗ್ಗೆ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಕೇವಲ ಶಾಸಕರಲ್ಲ. ಪಕ್ಷದ ವಕ್ತಾರರೂ ಹೌದು. ಕೆಲವು ವಿಚಾರವನ್ನು ಕೃಷ್ಣಭೈರೇಗೌಡರಿಂದ ಮತ್ತೆ ಕೆಲವು ವಿಚಾರವನ್ನು ಬಿ.ಎಲ್ ಶಂಕರ್ ಅವರಿಂದ, ಮೈಸೂರಿನ ಲಕ್ಷ್ಮಣ್ ಅವರಿಂದ ಮಾತನಾಡಿಸುತ್ತೇವೆ. ಮತ್ತೆ ಕೆಲವು ವಿಚಾರಗಳಲ್ಲಿ ನಾನು, ಸಿದ್ದರಾಮಯ್ಯ ಮಾತನಾಡುತ್ತೇವೆ.