ಕರ್ನಾಟಕ

karnataka

ETV Bharat / state

ಹಿಂದೂ ದೇವಾಲಯಗಳನ್ನ ಮಾರೋದಕ್ಕೆ ಹೊರಟಿರುವ ಬಿಜೆಪಿ ಸರ್ಕಾರ ಸುಟ್ಟು ಭಸ್ಮವಾಗಲಿದೆ.. ಡಿಕೆಶಿ - ಬಿಜೆಪಿ ಸರ್ಕಾರದ ವಿರುದ್ದ ಡಿಕೆಶಿ ಕಿಡಿ

ಈ ರೀತಿ ಮಾಡಿದರೆ ಜನ ಮತ ಹಾಕುತ್ತಾರೆ ಎಂಬ ಭ್ರಮೆಯಿಂದ ಮುಖ್ಯಮಂತ್ರಿಗಳು ಹೊರ ಬರಬೇಕು. ದೇವಾಲಯಗಳಲ್ಲಿ ಈಗ ನಡೆದುಕೊಂಡು ಹೋಗುತ್ತಿರುವ ಆಚರಣೆಯನ್ನು ಮುಂದುವರೆಸಬೇಕು. ಇಲ್ಲದಿದ್ದರೆ ನಿಮ್ಮ ಪಕ್ಷ, ಸರ್ಕಾರ ಸುಟ್ಟು ಹೋಗುತ್ತದೆ. ನಾವು ಹಿಂದೂ ವಿರೋಧಿಗಳಲ್ಲ, ನೀವು ನಿಜವಾದ ಹಿಂದೂ ವಿರೋಧಿಗಳು..

d-k-shivakumar
ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್

By

Published : Dec 31, 2021, 10:46 PM IST

ಬೆಂಗಳೂರು :ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ತೆಗೆದು ಹಾಕುವ ನಿರ್ಧಾರದಿಂದ ಬಿಜೆಪಿ ಸರ್ಕಾರ ಭಸ್ಮವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಎಚ್ಚರಿಸಿದರು.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ರಾಜ್ಯದ ದೇವಾಲಯಗಳು ಜನರ ಆಸ್ತಿ. ಬಿಜೆಪಿ ಸರ್ಕಾರ ಈ ಆಸ್ತಿಯನ್ನು ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರಿಗೆ ಹಸ್ತಾಂತರ ಮಾಡಲು ಮುಂದಾಗಿದೆ. ಇದು ಹಿಂದೂ ವಿರೋಧಿ ನೀತಿಯಾಗಿದೆ.

ರಾಜ್ಯದ ಜನ ಹಾಗೂ ಆ ದೇವರು ಬಿಜೆಪಿಯನ್ನು ಕ್ಷಮಿಸುವುದಿಲ್ಲ. ಈ ನಿರ್ಧಾರದಿಂದ ಬಿಜೆಪಿ ಸರ್ಕಾರ ಸುಟ್ಟು ಭಸ್ಮವಾಗಲಿದೆ. ಕಾಂಗ್ರೆಸ್ ಹಿಂದೂ ವಿರೋಧಿಯಲ್ಲ, ಬಿಜೆಪಿ ನಿಜವಾದ ಹಿಂದೂ ವಿರೋಧಿ‌ ಎಂದು ಕಿಡಿಕಾರಿದರು.

ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪರಂಪರೆಯನ್ನು ಬುಡಮೇಲು ಮಾಡಲು ಸರ್ಕಾರ ಹೊರಟಿದೆ. ಒಂದೆರಡು ದೇವಾಲಯಗಳು, ಮಠಗಳನ್ನು ಬಿಟ್ಟರೆ ಉಳಿದೆಲ್ಲವೂ ಸರ್ಕಾರದ ನಿಯಂತ್ರಣದಲ್ಲಿವೆ.

ಎಲ್ಲ ದೇವಾಲಯಗಳಲ್ಲಿ ಜನರು ಕೋಟ್ಯಂತರ ರೂಪಾಯಿಯನ್ನು ಹುಂಡಿಗೆ ಹಾಕುತ್ತಾರೆ. ದೇವಾಲಯ ಇವತ್ತಿನದ್ದಲ್ಲ, ನೂರಾರು ವರ್ಷಗಳ ಆಸ್ತಿ. ಇದನ್ನು ತಮ್ಮ ಕಾರ್ಯಕರ್ತರಿಗೆ ಹಂಚಲು ಬಿಜೆಪಿ ಸರ್ಕಾರ ಹೊರಟಿದೆ‌ ಎಂದು ಆರೋಪಿಸಿದರು.

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ವಾಗ್ದಾಳಿ ನಡೆಸಿರುವುದು..

ನಾವು ಕೂಡ ಹಿಂದೂಗಳು. ಹಿಂದೂ ಧರ್ಮ ಹಾಗೂ ಸಂಸ್ಕೃತಿಯಲ್ಲಿ ನಂಬಿಕೆ ಇಟ್ಟಿರುವವರು. ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನಪರವಾದ ಒಂದೇ ಒಂದು ಯೋಜನೆಯನ್ನು ನೀಡಲಿಲ್ಲ. ನಮ್ಮ ಸರ್ಕಾರ ಕೊಟ್ಟ ಕಾರ್ಯಕ್ರಮಗಳು ಹಾಗೂ ಬಿಜೆಪಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ.

ನಾವು ಅದಕ್ಕೆ ಸಿದ್ಧ. ಈಗ ಚುನಾವಣೆಯಲ್ಲಿ ಸೋಲುತ್ತಿದ್ದೇವೆ ಎಂಬ ಕಾರಣಕ್ಕೆ ಇವರು ಗೋಹತ್ಯೆ, ಮತಾಂತರ ನಿಷೇಧ, ದೇವಾಲಯಗಳ ಸ್ವಾಯತ್ತತೆ ಕಾನೂನು ತರುತ್ತಿದ್ದಾರೆ. ಚುನಾವಣೆ ಸೋಲನ್ನು ಮರೆಮಾಚಲು, ಜನರನ್ನು ಭಾವನಾತ್ಮಕವಾಗಿ ಹಿಡಿದಿಡಲು ಪ್ರಯತ್ನಿಸುತ್ತಿದ್ದು, ನಾವು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಈ ರೀತಿ ಮಾಡಿದರೆ ಜನ ಮತ ಹಾಕುತ್ತಾರೆ ಎಂಬ ಭ್ರಮೆಯಿಂದ ಮುಖ್ಯಮಂತ್ರಿಗಳು ಹೊರ ಬರಬೇಕು. ದೇವಾಲಯಗಳಲ್ಲಿ ಈಗ ನಡೆದುಕೊಂಡು ಹೋಗುತ್ತಿರುವ ಆಚರಣೆಯನ್ನು ಮುಂದುವರೆಸಬೇಕು. ಇಲ್ಲದಿದ್ದರೆ ನಿಮ್ಮ ಪಕ್ಷ, ಸರ್ಕಾರ ಸುಟ್ಟು ಹೋಗುತ್ತದೆ. ನಾವು ಹಿಂದೂ ವಿರೋಧಿಗಳಲ್ಲ, ನೀವು ನಿಜವಾದ ಹಿಂದೂ ವಿರೋಧಿಗಳು.

ದೇವಾಲಯ ನಿಮ್ಮ ಆಸ್ತಿಯಲ್ಲ, ರಾಜ್ಯದ ಜನರ ಆಸ್ತಿ. ದೇವರು, ದೇವಾಲಯಗಳನ್ನೇ ಮಾರಲು ಹೊರಟಿರುವ ನೀವು ಎಂತಹ ಕ್ರೂರ ಕೃತ್ಯಕ್ಕೆ ಕೈ ಹಾಕಿದ್ದೀರಿ. ಮುಂದಿನ ತಿಂಗಳು 4ರಂದು ನಾವು ಪಕ್ಷದ ನಾಯಕರ ಸಭೆಯಲ್ಲಿ ಈ ವಿಚಾರವಾಗಿ ಚರ್ಚೆ ಮಾಡಿ ಒಮ್ಮತದ ನಿರ್ಧಾರಕ್ಕೆ ಬರುತ್ತೇವೆ ಎಂದರು.

ದೇವಾಲಯಗಳನ್ನು ಭಕ್ತಾದಿಗಳಿಗೆ ನೀಡುತ್ತಿದ್ದೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ‘ಕಬ್ಬಾಳಮ್ಮ ದೇವಾಲಯದಲ್ಲಿ ಏನಾಗುತ್ತಿತ್ತು, ನಾನು ಅದರ ಜವಾಬ್ದಾರಿ ತೆಗೆದುಕೊಂಡ ಮೇಲೆ ಅಲ್ಲಿ ಎಷ್ಟು ಅಭಿವೃದ್ಧಿಯಾಗಿದೆ. ನಮ್ಮ ಬನಶಂಕರಿ ದೇವಾಲಯ, ಕಾಡು ಮಲ್ಲೇಶ್ವರ ದೇವಾಲಯಗಳು ಸರ್ಕಾರದ ನಿಯಂತ್ರಣದಲ್ಲಿವೆ. ಕಳೆದ ಬಾರಿ ಅವರು ಸಮಿತಿ ರಚಿಸಿದರು. ಅದು ಏನಾಯ್ತು? ಎಂಬುದನ್ನು ನೋಡಿ.

ಶಿಕ್ಷಣ ಸಂಸ್ಥೆಗಳ ಹೆಸರಲ್ಲಿ ಕೋಟ್ಯಂತರ ರೂಪಾಯಿಯನ್ನು ಸರ್ಕಾರ ಸಂಘ ಪರಿವಾರದವರಿಗೆ ನೀಡಿದೆ. ಈಗ ದೇವಾಲಯಗಳನ್ನು ಹಸ್ತಾಂತರಿಸುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಹಿತಾಸಕ್ತಿ, ಹಿಂದೂಗಳು ಹಾಗೂ ಧಾರ್ಮಿಕ ವಿಚಾರಗಳ ಸಂಬಂಧ ಕೈಗೊಂಡಿರುವ ಜನವಿರೋಧಿ ನಿರ್ಧಾರಗಳನ್ನು ವಾಪಸ್ ತೆಗೆದುಕೊಳ್ಳುತ್ತೇವೆ ಎಂದರು.

ಮತಾಂತರ ನಿಷೇಧ ಕಾಯ್ದೆ ಜಾರಿಗೆ ವಿಶೇಷ ಟಾಸ್ಕ್ ಫೋರ್ಸ್ ರಚನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಅದು ಸಾಧ್ಯವಿಲ್ಲ. ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ತರಲು ಮುಂದಾಗಿದೆ. ಈ ರಾಜ್ಯದಲ್ಲಿ ಕಾನೂನು ಇದೆ. ಸರ್ಕಾರದ ನಿಲುವಿನ ವಿರುದ್ಧ ಜನರ ಮುಂದೆ ಹೋಗಿ ಹೋರಾಡುತ್ತೇವೆ. ನಾವು ಅಧಿಕಾರಕ್ಕೆ ಬಂದ ನಂತರ ಈ ಎಲ್ಲ ನಿರ್ಧಾರವನ್ನು ಹಿಂಪಡೆಯುತ್ತೇವೆ’ ಎಂದರು.

ಆರ್​ಎಸ್ಎಸ್ ನಾಯಕರನ್ನು ಓಲೈಸಲು ಈ ರೀತಿ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ, ‘ಬಿಜೆಪಿ ನಾಯಕತ್ವದ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿ, ನಮ್ಮವರನ್ನೆಲ್ಲ ಕರೆದುಕೊಂಡು ಹೋಗಿ ಸರ್ಕಾರ ಮಾಡಿದ್ದಾರೆ. ಆದರೆ, ಇಂತಹ ನಿರ್ಧಾರಗಳನ್ನು ರಾಜ್ಯದ ಜನ ಯಾವ ಕಾರಣಕ್ಕೂ ಕ್ಷಮಿಸುವುದಿಲ್ಲ. ದೇವರೂ ಕ್ಷಮಿಸುವುದಿಲ್ಲ’ ಎಂದು ಉತ್ತರಿಸಿದರು.

ಡಿ.ಕೆ ಶಿವಕುಮಾರ್ ಅವರು ಬೆಕ್ಕಿನ ಕನಸಲ್ಲಿ ಇಲಿ ಕಂಡಿದ್ದಾರೆ ಎಂಬ ಸಿಎಂ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರು ಮುಖ್ಯಮಂತ್ರಿ ಆಗಿರುವ ಸಂತೋಷದಲ್ಲಿ ತೇಲಾಡುತ್ತಿದ್ದಾರೆ. ನಾವು ಬೇಸರ ಮಾಡಿಕೊಳ್ಳುವುದಿಲ್ಲ. ಅವರಿಗೆ ಜನ ಅಗತ್ಯ ಸಮಯದಲ್ಲಿ ಉತ್ತರ ಕೊಡುತ್ತಿದ್ದು, ಮುಂದೆಯೂ ನೀಡುತ್ತಾರೆ.

ಅವರು ನನ್ನ ಬಗ್ಗೆ ಏನಾದರೂ ಹೇಳಲಿ, ನನ್ನನ್ನು ಬೆಕ್ಕು, ಇಲಿ, ಹುಲಿ ಯಾವುದರ ಕಣ್ಣಿಗಾದರೂ ಹಾಕಲಿ. ಸಗಣಿಗೆ ಗರಿಕೆ ಚುಚ್ಚಿ ಪಿಳ್ಳಾರತಿ ಮಾಡಿದರೆ ಗಣೇಶ ಆಗುತ್ತದೆ. ಇಲಿ ಗಣೇಶನ ವಾಹನ. ಆದರೆ, ಈ ಸರಕಾರದವರು ಹಿಂದೂ ದೇವಾಲಯ ಮಾರಾಟ ಮಾಡಲು ಹೊರಟಿರುವುದು ಸರಿಯಲ್ಲ’ ಎಂದರು.

ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ‌ ಜನರ ಗೆಲುವು :ಕರ್ನಾಟಕ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿನ ಗೆಲುವು ಕೇವಲ ಕಾಂಗ್ರೆಸ್ ಪಕ್ಷದ್ದಲ್ಲ. ಇಡೀ ರಾಜ್ಯದ ಜನರ ಗೆಲುವು. ಜನ ಬಿಜೆಪಿ ಆಡಳಿತ ನೋಡಿದ್ದು, ಬದಲಾವಣೆ ಬಯಸಿದ್ದಾರೆ. ರಾಜ್ಯ ಕಾಂಗ್ರೆಸ್​ ಕಾರ್ಯಕರ್ತರು ಅತ್ಯುತ್ತಮ ಕೆಲಸ ಮಾಡಿದ್ದು, ಮತದಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು, ರಾಜ್ಯದಲ್ಲಿ ಬದಲಾವಣೆ ಗಾಳಿ ಆರಂಭವಾಗಿದೆ. ಉತ್ತಮ ಆಡಳಿತ ನೀಡುವ ಸರ್ಕಾರ ಬರಬೇಕು. ಬಿಜೆಪಿ ಯಾವ ಕಾರಣಕ್ಕೆ ನಾಯಕತ್ವ ಬದಲಾವಣೆ ಮಾಡುತ್ತಿದೆ, ಅವರು ಎಷ್ಟು ಜನ ಮುಖ್ಯಮಂತ್ರಿ ಮಾಡುತ್ತಾರೆ ಎಂಬುದರ ಬಗ್ಗೆ ನಾವು ಚರ್ಚೆ ಮಾಡುವುದಿಲ್ಲ. ಅದು ಅವರಿಗೆ ಬಿಟ್ಟ ವಿಚಾರ. ಆದರೆ, ಜನ ಬಿಜೆಪಿ ಸರ್ಕಾರ ಕಿತ್ತೊಗೆದು ಪರ್ಯಾಯ ಸರ್ಕಾರವನ್ನು ಬಯಸಿದ್ದಾರೆ ಎಂದರು.

2023ರ ಚುನಾವಣೆಗೆ ಇದು ಮುನ್ಸೂಚನೆಯೇ ಎಂಬ ಪ್ರಶ್ನೆಗೆ, ‘ಇದು ಕೇವಲ ನಗರ ಸ್ಥಳೀಯ ಸಂಸ್ಥೆಗಳ ವಿಚಾರ ಮಾತ್ರವಲ್ಲ. ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿಗಳ ಜಿಲ್ಲೆಯ ಜನರೇ ಬದಲಾವಣೆ ಬಯಸಿ ಕಾಂಗ್ರೆಸ್ ಗೆ ಮತ ನೀಡಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಚುನಾಯಿತ ಪ್ರತಿನಿಧಿಗಳು ಕೂಡ ಕಾಂಗ್ರೆಸ್ ಪರವಾಗಿ ನಿಂತಿದ್ದಾರೆ. ಬಿಜೆಪಿ ಸರ್ಕಾರ ತಮಗೆ ಸಿಕ್ಕ ಅವಕಾಶದಲ್ಲಿ ವಿಫಲರಾಗಿದ್ದು, ಜನ ಕಾಂಗ್ರೆಸ್ ಸರ್ಕಾರವನ್ನು ಬಯಸುತ್ತಿದ್ದಾರೆ ಎಂದು ಹೇಳಿದರು.

ಓದಿ:ಚಾಮುಂಡೇಶ್ವರಿ ವಿಶೇಷ ದರ್ಶನಕ್ಕೆ 300 ರೂ. ನಿಗದಿ

ABOUT THE AUTHOR

...view details