ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಪಕ್ಷದ ಮುಸ್ಲಿಂ ಮುಖಂಡರ ಜತೆ ಬೆಂಗಳೂರಿನ ಸದಾಶಿವನಗರದ ಗೃಹ ಕಚೇರಿಯಲ್ಲಿ ಮಂಗಳವಾರ ಸಮಾಲೋಚನೆ ನಡೆಸಿದರು.
ಹಿಜಾಬ್-ಕೇಸರಿ ಸಂಘರ್ಷದ ಕುರಿತ ವಿವಾದದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಮುಸ್ಲಿಂ ಮುಖಂಡರ ಜತೆಗೆ ಸಭೆ ಮಾಡಿರುವುದು.. ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು. ಟಿ ಖಾದರ್ ಮಾತನಾಡಿ, ಕೋಮುವಾದಿತನವನ್ನ ಸರ್ಕಾರ ಮೌನವಾಗಿ ನೋಡ್ತಿದೆ. ರಾಜಕೀಯ ಲಾಭವನ್ನ ನೋಡ್ತಿದೆ. ಒಂದು ಕಡೆ ಇದ್ದ ವಿಚಾರ ಇಷ್ಟು ದೊಡ್ಡದಾಗಿದೆ. ಬೇರೆ ಬೇರೆ ಕಾಲೇಜಿನಲ್ಲಿ ಸಮಸ್ಯೆಯಾಗಿದೆ.
ಸರ್ಕಾರ ಜವಾಬ್ದಾರಿಯುತವಾಗಿ ಯೋಚನೆ ಮಾಡಬೇಕು. ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಅದಕ್ಕೂ ಮೊದಲೇ ಸುತ್ತೋಲೆ ಹೊರಡಿಸಿದೆ. ಸರ್ಕಾರ ಶಿಕ್ಷಣ ಕೊಡಲು ನೋಡಬೇಕು. ಶಿಕ್ಷಣ ಮುಚ್ಚೋಕೆ ನೋಡಬಾರದು.
ನಾಳೆ ಏನಾಗುತ್ತೆ ಎಂಬ ಇಂಟಲಿಜೆನ್ಸ್ ರಿಪೋರ್ಟ್ ಇರಲ್ವಾ? ಇವತ್ತು ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಶಿವಮೊಗ್ಗದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನವಾಗಿದೆ. ಸರ್ಕಾರದ ಬೆಂಬಲವಿಲ್ಲದೆ ಹೀಗೆ ಮಾಡ್ತಿರಲಿಲ್ಲ. ಉಡುಪಿಗೆ ಸಂಬಂಧಿಸಿದಂತೆ ಪ್ರಕರಣ ಕೋರ್ಟ್‌ನಲ್ಲಿದೆ. ಇವತ್ತೇ ತೀರ್ಪು ಬರುತ್ತೆ ಎನ್ನಲಾಗಲ್ಲ.
ಶಿಕ್ಷಣ ಪಡೆಯೋಕೆ ಸರ್ಕಾರ ಅವಕಾಶ ಕೊಡಬೇಕು. ಹಿಂದಿನ ಪದ್ಧತಿಯನ್ನ ಮುಂದುವರಿಸಬೇಕಿತ್ತು. ಕೋರ್ಟ್ ತೀರ್ಮಾನ ಬಂದ ನಂತರ ಮಾಡಲಿ. ಸರ್ಕಾರ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಳ್ಳಲಿ ಎಂದು ಸಲಹೆ ನೀಡಿದರು.
ಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ. ಮಕ್ಕಳು ಶಾಲೆಯಿಂದ ಹೊರಗೆ ಕಣ್ಣೀರು ಸುರಿಸುತ್ತಿದ್ದಾರೆ. ಕೋರ್ಟ್ ತೀರ್ಪು ಬಂದ ನಂತರ ಕ್ರಮ ತೆಗೆದುಕೊಳ್ಳಲಿ. ಸರ್ಕಾರ ಮೌನವಾಗಿ ಕುಳಿತರೆ ಸರಿಯಲ್ಲ. ಬಿಜೆಪಿ ಬಂದ ನಂತರ ಶಿಕ್ಷಣ ಸರಿಯಾಗಿ ಆಗ್ತಿಲ್ಲ.
ಅವರಿಗೆ ಸರಿಯಾದ ಯೋಜನೆ ತರಲಿಲ್ಲ. ಸ್ಕಾಲರ್‌ಶಿಪ್ ಕೊಡಲಿಲ್ಲ. ರಾಜಕೀಯ ಲಾಭವನ್ನ ಪಡೆಯೋಕೆ ಹೊರಟಿದೆ. ಕಾಲೇಜಿಗೆ ಅಡ್ಡಿಪಡಿಸಿದರೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದರು.
ಹೊಸ ಡ್ರೆಸ್ ಕೋಡ್ ತರುವ ಸಮಯವಲ್ಲ. ಕೋರ್ಟ್‌ನಲ್ಲಿ ವಿಚಾರಣೆಯಿದೆ. ಏಕಾಏಕಿ ಪದ್ಧತಿ ಬದಲಾವಣೆ ಸರಿಯಲ್ಲ. ಕೋರ್ಟ್ ತೀರ್ಪು ಬಂದ ಮೇಲೆ ನಿರ್ಧರಿಸಿ. ಕಾಂಗ್ರೆಸ್ ಇದನ್ನ ಲಾಭಕ್ಕೆ ಬಳಸಿಕೊಳ್ತಿಲ್ಲ. ಆ ರೀತಿ ಹೇಳುವುದು ತಪ್ಪು. ಉಡುಪಿ ವಿಚಾರ ಬೇರೆ, ಕುಂದಾಪುರದ್ದು ಬೇರೆ.
ಮೊದಲಿನಿಂದ ಶಿರಸ್ತ್ರಾಣ ಹಾಕ್ತಿದ್ದಾರೆ. ಅದನ್ನ ಏಕಾಏಕಿ ಬದಲಾಯಿಸೋದು ಏಕೆ?. ಶಿರವಸ್ತ್ರ ಹಾಕಿ ಬಂದವರನ್ನ ನಿಲ್ಲಿಸೋದು ಸರಿಯೇ?. ಹಿಂದಿನ ಪದ್ಧತಿ ಇದ್ದರೆ ಮುಂದುವರೆಸಲಿ. ಹೊಸದಾಗಿ ಅವರು ಕೊಡುವುದು ಬೇಡ. ಶಾಲೆ ಮುಂದೆ ವಿದ್ಯಾರ್ಥಿಗಳು ಸೇರಲು ಅವಕಾಶ ಕೊಡಬಾರದು ಎಂದರು.
ಶಾಂತಿ ಕಾಪಾಡಬೇಕು
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ಇಂದು ಶಿವಮೊಗ್ಗದಲ್ಲಿ ಇಡೀ ದೇಶ ತಲೆತಗ್ಗಿಸುವಂಥ ಕೆಲಸ ಆಗಿದೆ. ರಾಷ್ಟ್ರ ಧ್ವಜವನ್ನ ಕೆಳಗಿಳಿಸಿ ಕೇಸರಿ ಧ್ವಜ ಹಾಕಿದ್ದಾರೆ. ಇದು ಬಹಳ ದುಃಖ ತರಿಸಿದೆ. ಸಿಎಂಗೆ ಡಿಕೆಶಿ ಮಾಹಿತಿ ನೀಡಿದ್ದಾರೆ. ಒಂದು ವಾರ ಕಾಲೇಜು ಬಂದ್ ಮಾಡಬೇಕು. ಆನ್‌ಲೈನ್ ಮೂಲಕ ತರಗತಿಗಳು ನಡೆಸಲಿ. ಇದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ.
ನಾವು ಎಲ್ಲಿಗೆ ತಲುಪುತ್ತಿದ್ದೇವೆ?. ಈ ವಿಷಯದಲ್ಲಿ ಸರ್ಕಾರ ಎಡವಿದೆ. ನಾವೆಲ್ಲಾ ಶಿಕ್ಷಣಕ್ಕೆ ಒತ್ತು ನೀಡಬೇಕು. ಅದು ನಮ್ಮ ಕರ್ತವ್ಯ. ನ್ಯಾಷನಲ್ ಫ್ಲ್ಯಾಗ್ ಇಳಿಸಿದ್ದು ದುರ್ದೈವ. ಇದರ ಬಗ್ಗೆ ಸರ್ಕಾರ ಉತ್ತರ ಕೊಡಬೇಕು. ರಾಷ್ಟ್ರದಲ್ಲಿ ರಾಜ್ಯದ ಮರ್ಯಾದೆ ಹೋಗಿದೆ. ಯಾರೇ ಮಾಡಿದ್ರು ನಿರ್ದ್ಯಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಕೋರ್ಟ್‌ನಲ್ಲಿ ಚರ್ಚೆ ನಡೆಯುತ್ತಿದೆ.
ಯಾಕೇ ಈಗಲೇ ಇಂಥ ಘಟನೆಗಳು ಆಗಬೇಕು. ನಮ್ಮಲ್ಲಿ ಮೂರು ಪದ್ಧತಿಗಳಿವೆ. ಬುರ್ಕಾ, ನಕಾಬ್, ಹಿಜಾಬ್. ನೂರಾರು ವರ್ಷಗಳಿಂದ ಇದನ್ನ ಪಾಲಿಸುತ್ತಿದ್ದೇವೆ. ಹಿಜಾಬ್-ಕೇಸರಿ ಸಂಘರ್ಷ ಬಗ್ಗೆ ತನಿಖೆಯಾಗಬೇಕು. ಕೆಲವು ಕಾಣದ ಕೈಗಳು ಇದರ ಹಿಂದೆ ಅಡಗಿವೆ. ಸರ್ಕಾರ ವಿಳಂಬ ಮಾಡಿದ್ದಕ್ಕೆ ಈ ಸಮಸ್ಯೆಗಳು ಆಗಿವೆ. ವಿದ್ಯಾರ್ಥಿಗಳು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಾಧ್ಯಕ್ಷ ಸಲೀಂ ಅಹಮದ್, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್, ಶಾಸಕರಾದ ಎನ್.ಎ. ಹ್ಯಾರೀಸ್, ಖನೀಜ್ ಫಾತಿಮಾ, ರಹೀಂ ಖಾನ್, ಎಂಎಲ್ಸಿ ನಜೀರ್ ಅಹಮದ್, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಮಾಜಿ ಅಧ್ಯಕ್ಷ ಸಯ್ಯದ್ ಅಹಮದ್ ಮತ್ತಿತರರು ಭಾಗವಹಿಸಿದ್ದರು.
ಓದಿ:Hijab Row: ಅರ್ಜಿ ವಿಚಾರಣೆ ಪುನರಾರಂಭಿಸಿದ ಹೈಕೋರ್ಟ್