ನವದೆಹಲಿ/ಬೆಂಗಳೂರು:ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ. ಇದು ಕರ್ನಾಟಕಕ್ಕೆ ದೊಡ್ಡ ನೋವಿನ ಸಂಗತಿ. ಯಾಕೆಂದರೆ, ರಾಜ್ಯದಲ್ಲೇ ನೀರಿಲ್ಲ ಹಾಗೂ ಮಳೆಯೂ ಇಲ್ಲ. ಆದ್ದರಿಂದ ಪ್ರಾಧಿಕಾರದ ಅಧಿಕಾರಿಗಳು ಕರ್ನಾಟಕಕ್ಕೆ ಬಂದು ವಸ್ತುಸ್ಥಿತಿ ಪರಿಶೀಲನೆ ನಡೆಸಲಿ. ಬರವಿರುವ ಕಾರಣ ಕರ್ನಾಟಕ ಹೇಗೆ ಬಳಲುತ್ತಿದೆ ಎಂಬುದರ ವಾಸ್ತವ ಅರಿತುಕೊಳ್ಳುವಂತೆ ಮನವಿ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಂದು ದೆಹಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಕಾನೂನು ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಜಲ ಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಸಮಾಲೋಚಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಇಂದು ನಾವು ನಮ್ಮ ಎಲ್ಲ ಕಾನೂನು ತಜ್ಞರೊಂದಿಗೆ ಸಭೆ ನಡೆಸಿದ್ದೇವೆ. ನಮ್ಮ ತಂಡವು ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲರನ್ನು ಭೇಟಿ ಮಾಡಿ ಚರ್ಚಿಸಲಿದೆ'' ಎಂದು ಹೇಳಿದರು.
''24 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ತಮಿಳುನಾಡು ಮನವಿ ಮಾಡಿದೆ. ನಮ್ಮ ಅಧಿಕಾರಿಗಳು ವಾಸ್ತವ ಅಂಕಿ-ಅಂಶಗಳನ್ನು ಮಂಡಿಸಿದ್ದಾರೆ. ಆದರೂ, 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ನಮಗೆ ಆದೇಶ ನೀಡಲಾಗಿದೆ. ಆದರೆ, ಇದು ಕೂಡ ಕರ್ನಾಟಕಕ್ಕೆ ನೋವಿನ ವಿಷಯ. ಮಳೆ ಹಾಗೂ ನೀರಿದ್ದರೆ ನಾವು ಬಿಡುತ್ತಿದ್ದೆವು. ಈ ಹಿಂದೆ ಕೂಡ ನಮಗೆ ಕೊಟ್ಟ ಆದೇಶಕ್ಕೆ ಗೌರವ ಕೊಟ್ಟಿದ್ದೇವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಕರ್ನಾಟಕಕ್ಕೆ ಬಂದು ಪರಿಶೀಲಿಸಿ ವಾಸ್ತವ ಅರಿತುಕೊಳ್ಳಲಿ ಎಂದು ಮನವಿ ಮಾಡಲಿದ್ದೇವೆ'' ಎಂದು ಮಾಹಿತಿ ನೀಡಿದರು.