ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಿಜಯಪುರದ ಸಿಂದಗಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಸ್ಥಳೀಯ ಮುಖಂಡರ ಜತೆ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸಮಾಲೋಚನೆ ನಡೆಸಿದರು.
ಕಾಂಗ್ರೆಸ್ ಮುಖಂಡರ ಜೊತೆ ಡಿಕೆಶಿ ಸಭೆ ಸಿಂದಗಿ ಕ್ಷೇತ್ರದ ಜೆಡಿಎಸ್ ಶಾಸಕ ಎಂ ಸಿ ಮನಗೂಳಿ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಶೀಘ್ರವೇ ಉಪ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇರುವ ಹಿನ್ನೆಲೆ, ಅಭ್ಯರ್ಥಿ ಆಯ್ಕೆ ಸಂಬಂಧ ಪ್ರಾಥಮಿಕ ಚರ್ಚೆ ನಡೆಸಲು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ಸಭೆ ಕರೆದಿದ್ದರು. ಪಕ್ಷಕ್ಕೆ ಸಿಂದಗಿಯಲ್ಲಿ ಗೆಲ್ಲುವ ಅಭ್ಯರ್ಥಿಯ ಕೊರತೆಯಿರುವ ಹಿನ್ನೆಲೆ ಎಂ ಸಿ ಮನಗೂಳಿ ಅವರ ಪುತ್ರರಲ್ಲಿ ಒಬ್ಬರನ್ನು ಜೆಡಿಎಸ್ ನಿಂದ ಕಾಂಗ್ರೆಸ್ಗೆ ಕರೆತಂದು ಅಭ್ಯರ್ಥಿಯನ್ನಾಗಿಸುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆದಿದೆ. ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಉಪಚುನಾವಣೆಯಲ್ಲಿ ಕಣಕ್ಕಿಳಿಸಲು ನಿರ್ಧರಿಸಿರುವ ಹಿನ್ನೆಲೆ ಕಾಂಗ್ರೆಸ್ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಈ ಮೂಲಕ ತಮ್ಮ ಶಾಸಕರು ಇಲ್ಲದ ಕ್ಷೇತ್ರದಲ್ಲಿಯೂ ನೆಲೆ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲು ಮುಂದಾಗಿದೆ ಎನ್ನಲಾಗ್ತಿದೆ.
ಬಿಜೆಪಿಯಿಂದ ಮನಗೂಳಿ ಪುತ್ರರಿಗೆ ಗಾಳ ಹಾಕುವ ಸಾಧ್ಯತೆ ಕಡಿಮೆ ಇದೆ. ಏಕೆಂದರೆ ಎರಡು ಬಾರಿ ಶಾಸಕರಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋಲನುಭವಿಸಿದ್ದ ರಮೇಶ ಭೂಸನೂರ ತಮ್ಮ ಪ್ರಯತ್ನ ಇನ್ನೊಮ್ಮೆ ಮಾಡುವ ಸಾಧ್ಯತೆ ಇದೆ. ಇವರಿಗೆ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಸಂಸದ ರಮೇಶ್ ಜಿಗಜಿಣಗಿ ಅವರ ಬೆಂಬಲ ಸಹ ಇದೆ. ಈ ಹಿನ್ನೆಲೆ ಕಾಂಗ್ರೆಸ್ ಪಕ್ಷ ಈಗ ಲಭಿಸಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಮನಗೂಳಿ ಅನುಕಂಪವನ್ನು ಗಿಟ್ಟಿಸುವ ಚಿಂತನೆ ನಡೆಸಿದೆ. ಸಭೆಯಲ್ಲಿ ಸಹ ಡಿ ಕೆ ಶಿವಕುಮಾರ್ ಈ ವಿಚಾರ ಪ್ರಸ್ತಾಪಿಸಿ ಸ್ಥಳೀಯ ಕಾಂಗ್ರೆಸ್ ನಾಯಕರ ಅಭಿಪ್ರಾಯ ಕೇಳಿದ್ದಾರೆ.
ಓದಿ : ಸಚಿವರಿಗೆ ಮಾನಹಾನಿ ಭೀತಿ : ಮಾಧ್ಯಮ ವರದಿಗಳಿಗೆ ಮಧ್ಯಂತರ ತಡೆ ನೀಡಿದ ಕೋರ್ಟ್
ಮುಂಬರುವ ದಿನಗಳಲ್ಲಿ ಇನ್ನೂ ಒಂದೆರಡು ಹಂತದ ಸಭೆ ನಡೆಸಿ ಮನಗೂಳಿ ಉತ್ತರವನ್ನು ಕಾಂಗ್ರೆಸ್ಗೆ ತರುವ ಪ್ರಯತ್ನ ನಡೆಸಲು ತೀರ್ಮಾನಿಸಲಾಗಿದೆ. ಪಕ್ಷ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ಧವಾಗಿರುತ್ತವೆ ಮತ್ತು ನಮ್ಮ ಬೆಂಬಲ ಸೂಚಿಸುತ್ತೇವೆ ಎಂದು ಹಿಂದಿನ ಸಭೆಯಲ್ಲಿ ಭಾಗವಹಿಸಿದ್ದ ವಿಜಯಪುರ ಜಿಲ್ಲಾ ಕಾಂಗ್ರೆಸ್ ಮುಖಂಡರು ಭರವಸೆ ನೀಡಿದ್ದಾರೆ. ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಆರ್. ಹಲಗೂರ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.