ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಸಹಕಾರಿಯಾಗಲು ರೈತ ಸಂಜೀವಿನಿ ಆ್ಯಂಬುಲೆನ್ಸ್ ಸೇವೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು. ಬೆಂಗಳೂರಿನ ಕ್ರೀನ್ಸ್ ರಸ್ತೆ ಕೆಪಿಸಿಸಿ ಕಚೇರಿಯಲ್ಲಿ ಕರ್ನಾಟಕ ಕಿಸಾನ್ ಕಾಂಗ್ರೆಸ್ ವತಿಯಿಂದ ಈ ಸಮಾರಂಭ ನಡೆಯಿತು. ಜೊತೆಗೆ ರೈತರಿಂದ ಖರೀದಿಸಿ ಬಡವರಿಗೆ ಉಚಿತವಾಗಿ ನೀಡಲು ಸಂಗ್ರಹಿಸಿದ ತರಕಾರಿ ವಿತರಣೆಗೂ ಚಾಲನೆ ದೊರೆಯಿತು.
ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ ಮಾತನಾಡಿದ ಕಾಂಗ್ರೆಸ್ ಕಿಸಾನ್ ಮೋರ್ಚಾ ಅಧ್ಯಕ್ಷ ಸಚಿನ್ ಮೀಗಾ, ರಾಜ್ಯದಲ್ಲಿ 8 ರೈತ ಆರೋಗ್ಯ ಸಂಜೀವಿನಿ ಆ್ಯಂಬುಲೆನ್ಸ್ ಸೇವೆ ಲಭ್ಯ ಇವೆ. ದಾವಣಗೆರೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಗಂಗಾ ಬಸವರಾಜ್ ನೇತೃತ್ವದಲ್ಲಿ ಚನ್ನಗಿರಿ ವಿಧಾನಸಭೆ ವ್ಯಾಪ್ತಿಯಲ್ಲಿ ರೈತ ಆರೋಗ್ಯ ಸಂಜೀವಿನಿ ಆ್ಯಂಬುಲೆನ್ಸ್ ಸೇವೆಗೆ ಲಭ್ಯವಾಗಲಿದೆ. ಕಿಸಾನ್ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಮಂಜುನಾಥ್ ಉತ್ತರಕರ್ನಾಟಕ ಉತ್ತರಕನ್ನಡ ವ್ಯಾಪ್ತಿಯ ಕಿಸಾನ್ ಕಾಂಗ್ರೆಸ್ ನಾಯಕರಾದ ಶಿವಾನಂದ ಹೆಗಡೆ ಕುಮಟಾ, ರಾಜ್ಯ ಕಿಸಾನ್ ಕಾಂಗ್ರೆಸ್ ಸಂಚಾಲಕರುಗಳಾದ ಸಿದ್ದು ಕೊಟ್ಟೂರು ಹಾಗೂ ಪದ್ಮಜಿತ್ ಜೈನ್ ತೆರೆದಾಳ್ ಅವರ ನೇತೃತ್ವದಲ್ಲಿ 5 ರೈತ ಆರೋಗ್ಯ ಸಂಜೀವಿನಿ ಆ್ಯಂಬುಲೆನ್ಸ್ ಸೇವೆ ಆರಂಭಿಸಲಾಗುತ್ತಿದೆ. ಎಲ್ಲಾ ಸೇವೆಗಳಿಗೂ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದ್ದಾರೆ. ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಇವು ತಮ್ಮ ಸೇವೆ ನೀಡಲಿವೆ ಎಂದು ತಿಳಿಸಿದರು.