ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ಎರಡು ದಿನ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ದೆಹಲಿಗೆ ತೆರಳುತ್ತಿರುವ ಡಿ ಕೆ ಶಿವಕುಮಾರ್, ದೆಹಲಿಯಲ್ಲಿ ಎಐಸಿಸಿ ನಾಯಕರ ಭೇಟಿಮಾಡಿ ಸಮಾಲೋಚನೆ ನಡೆಸಲಿದ್ದಾರೆ. ಇದಲ್ಲದೇ ನಾಳೆ ಎಐಸಿಸಿ ವತಿಯಿಂದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಯಲಿದ್ದು, ಈ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ವಾರಾಂತ್ಯದಲ್ಲಿ ದಿಲ್ಲಿಗೆ ತೆರಳಿರುವ ಡಿಕೆಶಿ ವರಿಷ್ಠರ ಭೇಟಿ ಸಂದರ್ಭ ಹಲವು ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಪಕ್ಷ ಬಲವರ್ಧನೆ, ಭಾರತ ಜೋಡೋ ಯಾತ್ರೆಯ ಯಶಸ್ಸು, ಮುಂಬರುವ ವಿಧಾನಸಭೆ ಚುನಾವಣೆಗೆ ಕೈಗೊಂಡಿರುವ ಸಿದ್ಧತೆ, ಬಿಬಿಎಂಪಿ ಚುನಾವಣೆ ಗೆಲುವಿಗೆ ಹೆಣೆದಿರುವ ತಂತ್ರಗಾರಿಕೆ, ಕಾಂಗ್ರೆಸ್ ಪಕ್ಷದ ಸದಸ್ಯತ್ವ ಹೆಚ್ಚಳ ಮತ್ತು ಕಾರ್ಯಕರ್ತರ ನೈತಿಕ ಬಲವರ್ಧನೆಗೆ ಕೈಗೊಂಡಿರುವ ಕ್ರಮ, ಕೆಪಿಸಿಸಿ ವಿವಿಧ ವಿಭಾಗಗಳಿಗೆ ಮುಖ್ಯಸ್ಥರ ನೇಮಕ ಹಾಗೂ ಬದಲಾವಣೆ, ಹೊಸದಾಗಿ ನೇಮಕಗೊಂಡಿರುವ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳಿಗೆ ವಹಿಸಿರುವ ಜವಾಬ್ದಾರಿ, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಕೈಗೊಂಡಿರುವ ಕಾರ್ಯಕ್ರಮಗಳು ಹಾಗೂ ಸರ್ಕಾರದ ವಿರುದ್ಧದ ಹೋರಾಟಗಳ ವಿಷಯವನ್ನು ಪಕ್ಷದ ವರಿಷ್ಠರಿಗೆ ವಿವರಿಸಲಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಇನ್ನಷ್ಟು ಉತ್ತಮ ಬಾಂಧವ್ಯ ವೃದ್ಧಿಸಿಕೊಂಡು ಪಕ್ಷ ಬಲವರ್ಧನೆಗೆ ಶ್ರಮಿಸುವಂತೆ ಎಐಸಿಸಿ ವರಿಷ್ಠರು ಡಿ ಕೆ ಶಿವಕುಮಾರ್ ಅವರಿಗೆ ಸೂಚನೆ ನೀಡಿದ್ದಾರೆ. ಈ ವಿಚಾರವಾಗಿಯೂ ಸಹ ಇನ್ನಷ್ಟು ಸಲಹೆ ಸೂಚನೆಗಳನ್ನು ನೀಡುವ ಸಾಧ್ಯತೆ ಇದೆ. ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಅವಕಾಶ ಕರ್ನಾಟಕದಲ್ಲಿ ಮಾತ್ರವಿದೆ. ಈ ಅವಕಾಶವನ್ನ ಸದ್ಬಳಕೆ ಮಾಡಿಕೊಳ್ಳಿ. ಸಾಧ್ಯವಾದಷ್ಟು ಜನರೊಂದಿಗೆ ಬೆರೆಯಿರಿ ಮತ್ತು ಜನಪರ ಕಾರ್ಯಗಳನ್ನು ಕೈಗೊಳ್ಳಿ ಎಂದು ಕಾಂಗ್ರೆಸ್ ನಾಯಕರು ಸೂಚಿಸಿದ್ದು, ಈ ವಿಚಾರವಾಗಿ ಡಿಕೆಶಿ ಒಂದಿಷ್ಟು ಚರ್ಚೆ ನಡೆಸಲಿದ್ದಾರೆ.