ಕರ್ನಾಟಕ

karnataka

ETV Bharat / state

ಡಿಕೆಶಿಗೆ ಕೊರೊನಾ ಬಗ್ಗೆ ಕಾಳಜಿ ಇಲ್ಲವೇ?: ಮಾಸ್ಕ್, ಸಾಮಾಜಿಕ ಅಂತರ ಮರೆತು ಮೀಟಿಂಗ್ - ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ನಿನ್ನೆ ಹಾಗೂ ಇಂದು ಡಿ.ಕೆ. ಶಿವಕುಮಾರ್ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಮಾಜಿ ಸಚಿವರಾದ ಯು.ಟಿ. ಖಾದರ್, ಅಭಯಚಂದ್ರ ಜೈನ್, ಮೇಲ್ಮನೆ ಮಾಜಿ ಸದಸ್ಯ ಐವಾನ್ ಡಿಸೋಜಾ ಇವರ ಜತೆಗಿದ್ದರು. ವಿಪರ್ಯಾಸವೆಂದರೆ, ಇಂದೇ ಐವಾನ್ ಡಿಸೋಜಾ ಅವರ ಕೊರೊನಾ ತಪಾಸಣೆಯ ವರದಿ ಬಂದಿದ್ದು, ಪಾಸಿಟಿವ್ ಎಂದು ದೃಢಪಟ್ಟಿದೆ

D K Shivakumar
ಡಿಕೆಶಿಗೆ ಕೊರೊನಾ ಬಗ್ಗೆ ಕೇರ್​ಲೆಸ್

By

Published : Aug 1, 2020, 10:28 PM IST

Updated : Aug 2, 2020, 2:24 PM IST

ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೊರೊನಾ ಮಹಾಮಾರಿಯನ್ನು ಅತ್ಯಂತ ಹಗುರವಾಗಿ ಪರಿಗಣಿಸಿದಂತಿದೆ. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವನ್ನೂ ಮರೆತು ಅವರು ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ. ಇವರ ಸುತ್ತಲೇ ಸುಳಿಯುತ್ತಿರುವ ಕೊರೊನಾವನ್ನು ನಿರ್ಲಕ್ಷ್ಯ ಮಾಡಿರುವುದು ವಿಪರ್ಯಾಸದ ಸಂಗತಿ.

ಕೆಪಿಸಿಸಿ ಅಧ್ಯಕ್ಷರಾಗಿ ಘೋಷಿತರಾಗಿದ್ದು ಮಾ.11ಕ್ಕಾದರೂ, ಅಧಿಕೃತ ಪದಗ್ರಹಣ ನಡೆದದ್ದು ಜು.2ಕ್ಕೆ. ಅಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದ, ಜತೆಯಲ್ಲೇ ಓಡಾಡಿಕೊಂಡು ಸಮಾರಂಭದ ಉಸ್ತುವಾರಿ ವಹಿಸಿದ್ದ ಸಂಬಂಧಿ ಹಾಗೂ ಕುಣಿಗಲ್ ಶಾಸಕ ಡಾ. ರಂಗನಾಥ್ ಪದಗ್ರಹಣ ಸಮಾರಂಭ ಮುಗಿದ ಎರಡು ದಿನದಲ್ಲೇ ಕೊರೊನಾದಿಂದ ಆಸ್ಪತ್ರೆ ಸೇರಿದರು. ಇವರ ಜತೆ ಓಡಾಡಿದ್ದ ಕೆಪಿಸಿಸಿಯ ಐವರು ಸಿಬ್ಬಂದಿಗೆ ಕೊರೊನಾ ಬಂತು. ಇವರ ನಂತರ ಡಿಕೆಶಿ ಸಾಂಗತ್ಯಕ್ಕೆ ಬಂದ ಇತರೆ ಕೈ ಶಾಸಕರಾದ ಎನ್. ಶಿವಣ್ಣ, ಡಾ.ಅಜಯ್ ಸಿಂಗ್, ಟಿ.ಡಿ.ರಾಜೇಗೌಡ, ಪ್ರಸಾದ್ ಅಬ್ಬಯ್ಯ, ಮಹಾಂತೇಶ ಕೌಜಲಗಿ ಅವರನ್ನೂ ಕೊರೊನಾ ಬೆನ್ನತ್ತಿದೆ. ಜು.9ರಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ವೈದ್ಯರ ಘಟಕದ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಹಾಗೂ ವಿಧಾನಸಭೆ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ಅಂದು ಸಂಜೆಯೇ ಕೊರೊನಾ ಪಾಸಿಟಿವ್ ಆದರು.

ಡಿಕೆಶಿಗೆ ಕೊರೊನಾ ಬಗ್ಗೆ ಕೇರ್​ಲೆಸ್: ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಇಲ್ಲದೇ ಮೀಟಿಂಗ್!

ಅಂತರವಿಲ್ಲದೇ ಓಡಾಟ:

ಕೊರೊನಾ ಸ್ವಾಬ್ ತಪಾಸಣೆಗೆ ಒಳಗಾದ ಹಲವು ನಾಯಕರು ಅತ್ಯುತ್ಸಾಹದಿಂದ ಆತಂಕವೇ ಇಲ್ಲದಂತೆ ಓಡಾಡಿಕೊಂಡಿದ್ದಾರೆ. ಇವರಿಂದ ಆಪ್ತರು ಹಾಗೂ ಅವರ ಒಡನಾಟಕ್ಕೆ ಬರುವವರಿಗೇ ಕೊರೊನಾ ವಕ್ಕರಿಸುತ್ತಿದೆ. ಜನರ ಪ್ರತಿನಿಧಿಗಳಾಗಿ ಜವಾಬ್ದಾರಿಯಿಂದ ವರ್ತಿಸಬೇಕಿದ್ದ ಜನಪ್ರತಿನಿಧಿಗಳೇ ಇಷ್ಟೊಂದು ನಿರ್ಲಕ್ಷ್ಯ ತಾಳಿರುವುದು ಎಷ್ಟು ಸರಿ? ಎನ್ನುವ ಜಿಜ್ಞಾಸೆಯೂ ಮೂಡುತ್ತಿದೆ. ಆದಾಗ್ಯೂ ಸಭೆಯ ಮೇಲಕೆ ಸಭೆ, ಭೇಟಿಯ ನಂತರ ಭೇಟಿ ನಡೆಸುತ್ತಲೇ ಇರುವ ಕನಕಪುರ ಬಂಡೆ ಕೊರೊನಾಗೆ ಅಂಜಿದಂತೆ ಕಾಣುತ್ತಿಲ್ಲ.

ವಿಪರ್ಯಾಸವೆಂದರೆ ಡಿಕೆಶಿ ಮಹತ್ವಾಕಾಂಕ್ಷೆಯ ಪದಗ್ರಹಣ ನೆರವೇರಿದ ದಿನದಿಂದಲೂ ಪಕ್ಷ ಸಂಘಟನೆಗೆ ಮುಂದಾಗಿದ್ದು, ಇವರು ವಿವಿಧ ಭಾಗಗಳಿಗೆ ತೆರಳಿದಲ್ಲಿ, ನಡೆಸಿದ ಸಭೆಗಳಲ್ಲಿ ಪಾಲ್ಗೊಳ್ಳುವ ನಾಯಕರು ಕೊರೊನಾಪೀಡಿತರಾಗಿ ಆತಂಕ ಮೂಡಿಸುತ್ತಿದ್ದಾರೆ. ಮಾಸ್ಕ್ ಧರಿಸುವುದರಿಂದ ಸಾಕಷ್ಟು ದೂರವೇ ಇರುವ ಶಿವಕುಮಾರ್ ಅದ್ಯಾವ ಧೈರ್ಯದ ಮೇಲೆ ಇಷ್ಟೊಂದು ಕಡೆ ಓಡಾಡಿಕೊಂಡು, ಸಭೆ, ಸಮಾರಂಭ ನಡೆಸುತ್ತಿದ್ದಾರೆ ಎನ್ನುವುದೇ ಅಚ್ಚರಿಯ ಪ್ರಶ್ನೆಯಾಗಿದೆ. ಇವರ ಜತೆ ಬೆರೆತ ಅನೇಕ ನಾಯಕರು ಕೊರೊನಾಗೆ ತುತ್ತಾಗಿದ್ದಾರೆ. ಆಪ್ತವಾಗಿ ಇವರ ಜತೆ ಓಡಾಡಿಕೊಂಡಿದ್ದಾರೆ. ಕಾಂಗ್ರೆಸ್ ಕಚೇರಿಯೇ ಕೆಲದಿನ ಸೀಲ್ಡೌನ್ ಆಗಿತ್ತು. ಡಿಕೆಶಿ ಕೂಡ ಒಂದೆರಡು ಬಾರಿ ತಾತ್ಕಾಲಿಕವಾಗಿ ಹೋಮ್ ಕ್ವಾರಂಟೈನ್ ಆಗಿದ್ದರು.

ಇಂದು ಮರುಕಳಿಸಿದ ಆತಂಕ:

ನಿನ್ನೆ ಹಾಗೂ ಇಂದು ಡಿ.ಕೆ. ಶಿವಕುಮಾರ್ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಇಲ್ಲಿಯೂ ಅವರಿಗೆ ಕೊರೊನಾ ಆತಂಕ ದೂರವಾಗಿಲ್ಲ. ನಿನ್ನೆ ಡಿ.ಕೆ. ಶಿವಕುಮಾರ್ ಅವರು ಕೇಂದ್ರದ ಮಾಜಿ ಜನಾರ್ಧನ ಪೂಜಾರಿ ಅವರ ಬಂಟ್ವಾಳ ನಿವಾಸಕ್ಕೆ ಭೇಟಿ ನೀಡಿ, ಆರೋಗ್ಯಕ್ಷೇಮ ಸಮಾಚಾರ ವಿಚಾರಿಸಿದರು. ಕೊರೊನಾದಿಂದ ಗುಣಮುಖರಾಗಿದ್ದು, ಇವರನ್ನು ಮಾತನಾಡಿಸಲು ತೆರಳಿದ್ದ ಸಂದರ್ಭ ಇವರ ಜತೆ ಪಾಸಿಟಿವ್ ಆಗಿ 14 ದಿನವೂ ಪೂರ್ತಿಯಾಗದ ಮಿಥುನ್ ರೈ ಸಾಥ್ ಕೊಟ್ಟಿದ್ದರು.

ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ದರ್ಶನ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಭೇಟಿ ಸಂದರ್ಭ ಮಿಥುನ್ ರೈ ಜತೆಯಲ್ಲೇ ಇದ್ದರು. ಇಂದು ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಅವರ ಮಂಗಳೂರು ನಿವಾಸಕ್ಕೆ ಭೇಟಿ ನೀಡಿದ್ದ ಡಿಕೆಶಿ, ಅವರ ಆರೋಗ್ಯ ಕ್ಷೇಮ ವಿಚಾರಿಸಿದ್ದಾರೆ. ಮಾಜಿ ಸಚಿವರಾದ ಯು.ಟಿ. ಖಾದರ್, ಅಭಯಚಂದ್ರ ಜೈನ್, ಮೇಲ್ಮನೆ ಮಾಜಿ ಸದಸ್ಯ ಐವಾನ್ ಡಿಸೋಜಾ ಜತೆಗಿದ್ದರು. ವಿಪರ್ಯಾಸವೆಂದರೆ, ಇಂದೇ ಐವಾನ್ ಡಿಸೋಜಾ ಅವರ ಕೊರೊನಾ ತಪಾಸಣೆಯ ವರದಿ ಬಂದಿದ್ದು, ಪಾಸಿಟಿವ್ ಎಂದು ದೃಢಪಟ್ಟಿದೆ.

ಹಿರಿಯ ನಾಯಕರ ನಡುವೆ ಡಿಕೆಶಿ, ಐವಾನ್ ಡಿಸೋಜಾ ಮಾಸ್ಕ್ ಧರಿಸದೇ ಕೂತಿದ್ದ ಚಿತ್ರ, ಓಡಾಡುವಾಗ ದಿನವಿಡೀ ಐವಾನ್ ಡಿಸೋಜಾ ಅವರು ಡಿಕೆಶಿ ಅವರೊಂದಿಗೇ ಇದ್ದದ್ದು ಕಂಡುಬಂದಿದೆ. ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಸೋಂಕು ಹರಡುತ್ತದೆ, ಅಲ್ಲದೇ ಇದು ವಯಸ್ಸಾದವರಿಗೆ ಮಾರಕವಾಗಿ ಪರಿಗಣಿಸುತ್ತದೆ ಎಂಬ ಮಾಹಿತಿ ಅರಿವಿದ್ದೂ, ಕೊರೊನಾ ತಪಾಸಣೆಗೆ ಒಳಗಾಗಿ ಸಾರ್ವಜನಿಕವಾಗಿ ಓಡಾಡುವ ಜನಪ್ರತಿನಿಧಿಗಳಿಗೆ ಕೊಂಚವೂ ಜವಾಬ್ದಾರಿ ಇಲ್ಲದೇ ಇರುವುದು ನಿಜಕ್ಕೂ ವಿಪರ್ಯಾಸ.

ಸದಾ ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸುವ, ಜನರ ನಡುವೆಯೇ ಓಡಾಡಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಂದಾದರೂ ಕೊಂಚ ಜಾಗೃತೆ ವಹಿಸಿದರೆ ಪ್ರತಿಪಕ್ಷವಾಗಿ ಅತ್ಯಂತ ಮಹತ್ವದ ಜವಾಬ್ದಾರಿ ನಿರ್ವಹಿಸಿದಂತೆ ಆಗಲಿದೆ. ತಪ್ಪೆಸಗುವ ಸರ್ಕಾರದ ಬಾಯಿ ಮುಚ್ಚಿಸುವ ಮಾತನಾಡುವ ನೈತಿಕತೆ ಬರುತ್ತದೆ ಎನ್ನುವ ಮಾತು ಜನರ ಬಾಯಲ್ಲಿ ಕೇಳಿಬರುತ್ತಿದೆ. ಮತ್ತೆ ಮತ್ತೆ ಕೊರೊನಾ ಸೋಂಕಿತರ ಒಡನಾಟಕ್ಕೆ ಒಳಗಾಗುತ್ತಿರುವ ಡಿ.ಕೆ. ಶಿವಕುಮಾರ್ ಮುಂದಿನ ದಿನಗಳಲ್ಲಾದರೂ ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಕಾರ್ಯಕ್ಕೆ ಒತ್ತು ಕೊಡಲಿ ಎನ್ನುವುದು ಆಶಯವಾಗಿದೆ.

Last Updated : Aug 2, 2020, 2:24 PM IST

ABOUT THE AUTHOR

...view details