ಕರ್ನಾಟಕ

karnataka

ETV Bharat / state

ಪರಿಸ್ಥಿತಿ ತಿಳಿಯಾಗುವವರೆಗೂ ಶಾಲಾ-ಕಾಲೇಜು ಬಂದ್ ಮಾಡಲು ಸಿಎಂಗೆ ಡಿಕೆಶಿ ಮನವಿ

ರಾಷ್ಟ್ರಧ್ವಜಕ್ಕೆ ನಾವು ಎಷ್ಟೊಂದು ಗೌರವ ಕೊಡುತ್ತೇವೆ. ಆದರೆ, ಈ ಸಂದರ್ಭದಲ್ಲಿ ರಾಷ್ಟ್ರಧ್ವಜ ಇಳಿಸುತ್ತಿದ್ದೇವೆ ಎಂದರೆ ಇದಕ್ಕಿಂತ ದೊಡ್ಡ ಅಪಮಾನ ಮತ್ತೊಂದಿಲ್ಲ. ನಮ್ಮ ರಾಷ್ಟ್ರ ಧ್ವಜದಲ್ಲೇ ಕೇಸರಿ ಇದೆ. ನಮಗೆ ಅದರ ಬಗ್ಗೆ ಗೌರವವಿದೆ. ಆದರೆ, ಈಗ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುತ್ತಿದ್ದಾರೆ..

d-k-shivakumar
ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಮಾತನಾಡಿದರು

By

Published : Feb 8, 2022, 4:24 PM IST

ಬೆಂಗಳೂರು :ಮುಖ್ಯಮಂತ್ರಿಗಳು ಈ ಕೂಡಲೇ ತಮ್ಮ ಅಧಿಕಾರಿಗಳಿಗೆ ಹೇಳಿ ಎಲ್ಲ ಶಾಲಾ-ಕಾಲೇಜುಗಳನ್ನು ಒಂದು ವಾರಗಳ ಕಾಲ ಮುಚ್ಚಿಸಿ. ಪರಿಸ್ಥಿತಿ ತಿಳಿಯಾಗುವವರೆಗೂ ಆನ್​​ಲೈನ್​​ ತರಗತಿಗಳನ್ನು ಮಾಡಿಸಬೇಕು.

ನ್ಯಾಯಾಲಯದ ತೀರ್ಪು ಬರುವವರೆಗೂ ಕಾಯಬೇಕು. ಸಮಾಜದಲ್ಲಿ ಶಾಂತಿ ಕಾಪಾಡಲು ಒಂದು ಕಠಿಣ ತೀರ್ಮಾನ ಕೈಗೊಳ್ಳಿ. ನಮ್ಮ ದೇಶವನ್ನು ಇಡೀ ವಿಶ್ವ ನೋಡುತ್ತಿದೆ. ಇಂತಹ ಗೊಂದಲ, ಘಟನೆಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

ಹಿಜಾಬ್‌-ಕೇಸರಿ ಶಾಲು ವಿವಾದದ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿರುವುದು..

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳು ಕೂಡ ಶಾಲೆ-ಕಾಲೇಜುಗಳನ್ನು ವಾರ ಕಾಲ ಮುಚ್ಚಿ, ಪರಿಸ್ಥಿತಿ ತಿಳಿಯಾಗಲು ಸಹಕರಿಸಬೇಕು‌.

ವಿದ್ಯಾರ್ಥಿಗಳು ಯಾವುದೇ ಪ್ರಚೋದನೆಗೆ ಒಳಗಾಗಬಾರದು. ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಶಾಂತಿ, ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದು ವಿನಂತಿಸುತ್ತೇನೆ ಎಂದರು.

ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಇವತ್ತು ಬಹಳ ದುಃಖದ ದಿನ. ಹೇಳಿಕೊಳ್ಳಲಾಗದಷ್ಟು ದುಃಖ ನನ್ನಲ್ಲಿ ಉಕ್ಕಿ ಬರುತ್ತಿದೆ. ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿ ಕಾಪಾಡಲು ನಮ್ಮ ಹಿರಿಯರು ಎಷ್ಟು ತ್ಯಾಗ, ಬಲಿದಾನ ಮಾಡಿದ್ದಾರೆ ಎಂಬುದನ್ನು ನಾವು ನಮ್ಮ ಪಾಠಗಳಲ್ಲಿ ಓದಿ, ಕಲಿತಿದ್ದೇವೆ.

ನಮ್ಮ ದೇಶದ ಐಕ್ಯತೆ ಸಮಗ್ರತೆಗೆ ನಮ್ಮ ಅನೇಕ ನಾಯಕರು ಪ್ರಾಣ ತ್ಯಾಗ ಮಾಡಿದ್ದಾರೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಸರ್ಕಾರ ರಚನೆಯಾದ ಮೇಲೆ ಸಂವಿಧಾನ ನೀಡಿದ್ದು, ಅದು ಹಾಗೂ ನಮ್ಮ ರಾಷ್ಟ್ರ ಧ್ವಜ ನಮ್ಮ ಧರ್ಮ ಎಂದಿದ್ದಾರೆ.

ಇಂದು ಒಂದು ಕಾಲೇಜಿನಲ್ಲಿ ನಮ್ಮ ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸುತ್ತಿದ್ದಾರೆ ಎಂದರೆ ಈ ರಾಜ್ಯದಲ್ಲಿ ಏನಾಗುತ್ತಿದೆ. ದೇಶ ಎತ್ತ ಸಾಗುತ್ತಿದೆ ಎಂದು ವಿಶ್ವದೆಲ್ಲೆಡೆ ಇರುವ ಭಾರತೀಯರು, ಕನ್ನಡಿಗರು ಆಘಾತದಿಂದ ನೋಡುತ್ತಿದ್ದಾರೆ. ವಿಶ್ವದ ಪ್ರತಿಷ್ಠಿತ 500 ಕಂಪನಿಗಳಲ್ಲಿ ನಮ್ಮ ಕನ್ನಡಿಗರು ಕೆಲಸ ಮಾಡುತ್ತಿದ್ದಾರೆ ಎಂದರು.

ವಿಶ್ವದ ಅನೇಕ ಕಡೆಗಳಲ್ಲಿ ಖ್ಯಾತ ವೈದ್ಯರು, ಇಂಜಿನಿಯರ್​ಗಳಾಗಿದ್ದಾರೆ. ನಮ್ಮಲ್ಲಿ ಉತ್ತಮ ಶಿಕ್ಷಣ ಪಡೆದ ಶೇ.11ರಷ್ಟು ವಿದ್ಯಾವಂತರನ್ನು ಹೊರದೇಶಗಳು ಕೆಲಸಕ್ಕೆ ತೆಗೆದುಕೊಂಡು ಅವರ ದೇಶದ ಅಭಿವೃದ್ಧಿಗೆ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಷ್ಟ್ರ ಧ್ವಜ ಕೆಳಗೆ ಇಳಿಯುತ್ತಿದೆ ಎಂದರೆ ಮನಸ್ಸಿಗೆ ಬಹಳ ನೋವಾಗುತ್ತಿದೆ ಎಂದು ಕಳವಳಪಟ್ಟಿದ್ದಾರೆ.

ರಾಷ್ಟ್ರಧ್ವಜಕ್ಕೆ ನಾವು ಎಷ್ಟೊಂದು ಗೌರವ ಕೊಡುತ್ತೇವೆ. ಆದರೆ, ಈ ಸಂದರ್ಭದಲ್ಲಿ ರಾಷ್ಟ್ರಧ್ವಜ ಇಳಿಸುತ್ತಿದ್ದೇವೆ ಎಂದರೆ ಇದಕ್ಕಿಂತ ದೊಡ್ಡ ಅಪಮಾನ ಮತ್ತೊಂದಿಲ್ಲ. ನಮ್ಮ ರಾಷ್ಟ್ರ ಧ್ವಜದಲ್ಲೇ ಕೇಸರಿ ಇದೆ. ನಮಗೆ ಅದರ ಬಗ್ಗೆ ಗೌರವವಿದೆ. ಆದರೆ, ಈಗ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುತ್ತಿದ್ದಾರೆ.

ಇದು ದೇಶಕ್ಕೆ ಬಹು ದೊಡ್ಡ ಕಳಂಕ. ಇದಕ್ಕೆ ಯಾರು ಕಾರಣ ಎಂಬುದನ್ನು ಈಗ ಚರ್ಚೆ ಮಾಡುವುದಿಲ್ಲ. ಈಗಾಗಲೇ ಲಾಠಿಚಾರ್ಚ್ ಪರಿಸ್ಥಿತಿ ಎದುರಾಗುತ್ತಿದ್ದು, ಮುಂದೆ ಇದು ಯಾವ ಸ್ವರೂಪ ಪಡೆಯುತ್ತದೆಯೋ ಗೊತ್ತಿಲ್ಲ.

ಇದರ ಬಗ್ಗೆ ಆತಂಕವಾಗುತ್ತಿದೆ. ನಾನು ಸದನದಲ್ಲಿ ಒಮ್ಮೆ ಹೇಳಿದ್ದೆ, ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಗಳಾಗಿದ್ದಾಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ ಸಮಯದಲ್ಲಿ, ಇಷ್ಟು ದಿನ ವಿಶ್ವ ನಾಯಕರು ದೆಹಲಿಗೆ ಬಂದು ಭಾರತದ ಬೇರೆ ನಗರಗಳಿಗೆ ಹೋಗುತ್ತಿದ್ದರು. ಆದರೆ, ಈಗ ಮೊದಲು ಬೆಂಗಳೂರಿಗೆ ಬಂದು ನಂತರ ದೆಹಲಿಗೆ ಆಗಮಿಸುತ್ತಿದ್ದಾರೆ ಎಂದಿದ್ದರು.

ಮತ್ತೊಮ್ಮೆ ಮನಮೋಹನ್ ಸಿಂಗ್ ಅವರು ನನ್ನ ಬಳಿ, ಇಡೀ ವಿಶ್ವ ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿದೆ. ನೀವು ಸ್ವಲ್ಪ ತಾಳ್ಮೆಯಿಂದ ಇರಬೇಕು ಎಂದು ನನಗೆ ಸಲಹೆ ಮಾಡಿದ್ದರು. ನಾನು ಈ ವಿಚಾರ ಯಾಕೆ ಹೇಳುತ್ತಿದ್ದೇನೆ ಎಂದರೆ ವಿದ್ಯಾರ್ಥಿಗಳ ಭವಿಷ್ಯ, ಉದ್ಯೋಗದ ಬಗ್ಗೆ ನಾವೆಲ್ಲರೂ ಗಮನಹರಿಸಬೇಕು.

ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಉತ್ತಮ ಉದ್ಯೋಗ, ಉತ್ತಮ ಬದುಕು ಕಟ್ಟಿಕೊಡುವ ವಿಚಾರದಲ್ಲಿ ಅನೇಕ ಕನಸುಗಳನ್ನು ಕಾಣುತ್ತಿದ್ದಾರೆ. ಆದರೆ, ಇಂತಹ ಘಟನೆಗಳು ಆ ಕನಸಿಗೆ ತಣ್ಣೀರೆರಚುತ್ತಿವೆ ಎಂದಿದ್ದಾರೆ.

ನಮ್ಮ ಧರ್ಮ ಸಂವಿಧಾನ. ನಮ್ಮ ವ್ಯಕ್ತಿಗತ ಆಚರಣೆಗಳನ್ನು ಏನಿದ್ದರೂ ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ. ಕಾಲೇಜಿನಲ್ಲಿ ಮೊದಲಿನಿಂದಲೂ ಏನೇನು ಆಚರಣೆ ನಡೆದುಕೊಂಡು ಬಂದಿದೆಯೋ ಅದನ್ನು ಪಾಲಿಸಿಕೊಂಡು ಹೋಗೋಣ. ಹೊಸದಾಗಿ ಸೃಷ್ಟಿಸುವುದರಲ್ಲಿ ಅರ್ಥವಿಲ್ಲ.

ರಾಹುಲ್ ಗಾಂಧಿ ಅವರು ಹೇಳಿದಂತೆ ಎಲ್ಲ ಧರ್ಮದವರಿಗೂ ಗೌರವ ಸಿಗಬೇಕು. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು ಎಂಬುದನ್ನು ನಂಬಿದ್ದೇವೆ.

ನಾವು ಹುಟ್ಟುವಾಗ ಯಾರೂ ಕೂಡ ಇಂತಹುದೇ ಧರ್ಮ, ಜಾತಿಯಲ್ಲಿ ಹುಟ್ಟುತ್ತೇವೆ ಎಂದು ಅರ್ಜಿ ಹಾಕಿಕೊಂಡು ಹುಟ್ಟಿರಲಿಲ್ಲ. ಅವರವರ ತಂದೆ-ತಾಯಿ ಪಾಲಿಸಿಕೊಂಡು ಬಂದಿದ್ದ ಆಚರಣೆಯನ್ನು ಮುಂದುವರೆಸುತ್ತಿದ್ದಾರೆ ಎಂದಿದ್ದಾರೆ.

ಓದಿ:ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ.. ಏಪ್ರಿಲ್ 16 ರಿಂದ ಮೇ 6ರ ತನಕ ಪರೀಕ್ಷೆ

For All Latest Updates

TAGGED:

ABOUT THE AUTHOR

...view details