ಬೆಂಗಳೂರು: ಸರ್ಕಾರ ನಿಗದಿ ಪಡಿಸಿರುವ ದರದಲ್ಲಿಯೇ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಾಗಲಿದೆ, ಆಸ್ಪತ್ರೆಗಳಲ್ಲಿ ಒಂದು ಡೋಸ್ ಲಸಿಕೆಗೆ 250 ರೂ ನೀಡಬೇಕಾಗುತ್ತದೆ ಎಂದು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬೆಂಗಳೂರು ಜಿಲ್ಲಾ ವ್ಯಾಪ್ತಿಯ ಲಸಿಕಾ ವಿತರಣಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಅವರು, ಇಂದಿನಿಂದ ಕೋವಿಡ್ ವ್ಯಾಕ್ಸಿನ್ ಲಸಿಕೆ ಸಾರ್ವಜನಿಕರಿಗೆ ನೀಡಲಾಗುತ್ತಿದ್ದು, 60 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರು ಮತ್ತು ಆರೋಗ್ಯ ಸಮಸ್ಯೆ ಇರುವ 45 ವರ್ಷದ ನಾಗರಿಕರಿಗೆ ಬೆಳಗ್ಗಿನಿಂದಲೇ ನೋಂದಣಿ ನಡೆಯುತ್ತಿದೆ. ಸಾರ್ವಜನಿಕರು ತಾಳ್ಮೆಯಿಂದ ಲಸಿಕೆ ಪಡೆಯಬೇಕು, ಯಾವುದೇ ಗೊಂದಲಕ್ಕೆ ಈಡಾಗಬಾರದು, ಪ್ರತಿಯೊಬ್ಬರಿಗೂ ಲಸಿಕೆ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.
ಆ್ಯಪ್ಗಳ ಕಾರ್ಯ ಸ್ಥಗಿತ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾನ್ಯವಾಗಿ ಸರ್ವರ್ ಲೋ ಆಗುತ್ತೆ. ಹೆಚ್ಚಿನ ಜನ ನೋಂದಣಿ ಮಾಡಿಕೊಳ್ಳುತ್ತಿರುವ ಕಾರಣ ಹೀಗೆ ಆಗುತ್ತೆ. ಮಧ್ಯಾಹ್ನದ ಬಳಿಕ ಆ್ಯಪ್ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆ. ಈ ಬಗ್ಗೆ ಜನರಿಗೆ ಗೊಂದಲಬೇಡ ಎಂದು ಪುನರುಚ್ಚರಿಸಿದರು.
ಯಾವುದೇ ಖಾಸಗಿ ಆಸ್ಪತ್ರೆಗಳು ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಕೇಂದ್ರ ಸರ್ಕಾರ 250 ರೂಪಾಯಿ ಫಿಕ್ಸ್ ಮಾಡಿದ್ದು, ಅದಕ್ಕಿಂತ ಹೆಚ್ಚು ಪಡೆದ ಪ್ರಕರಣಗಳು ಕಂಡುಬಂದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.