ಬೆಂಗಳೂರು:ಅಂಗಡಿಯೊಂದರಲ್ಲಿ ಸಿಲಿಂಡರ್ ರಿಫಿಲ್ಲಿಂಗ್ ಮಾಡುತ್ತಿದ್ದ ವೇಳೆ ಉಂಟಾದ ಸ್ಫೋಟದಿಂದ ಬಾಲಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿ ಭಾನುವಾರ ಬೆಳಗ್ಗೆ ಸಂಭವಿಸಿದೆ. ಹೆಬ್ಬಾಳದ ಗುಡ್ಡದಹಳ್ಳಿಯ ಸಿಲಿಂಡರ್ ಅಂಗಡಿಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಅಂಗಡಿ ಎದುರು ಆಡುತ್ತಿದ್ದ 13 ವರ್ಷದ ಮಹೇಶ್ ಎಂಬ ಬಾಲಕ ಬಲಿಯಾಗಿದ್ದಾನೆ.
ಯಾದಗಿರಿಯ ರಾಮಸಮುದ್ರ ಮೂಲದ ಮಲ್ಲಪ್ಪ ಸರಸ್ಪತಿ ದಂಪತಿಯ ಎರಡನೇ ಮಗ ಮಹೇಶ್, ಚೋಳನಾಯನಕ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದನು. ಮೃತನ ತಂದೆ-ತಾಯಿ ಹಲವು ವರ್ಷಗಳಿಂದ ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.
ಸಿಲಿಂಡರ್ ರಿಫಿಲ್ಲಿಂಗ್ ಮಾಡುವ ವೇಳೆ ದುರ್ಘಟನೆ:ದೇವರಾಜ್ ಎಂಬುವರಿಗೆ ಸೇರಿದ ಸಿಲಿಂಡರ್ ಅಂಗಡಿಯೊಂದರಲ್ಲಿ ಲಿಯಾಕತ್ ಎಂಬಾತ ಸಿಲಿಂಡರ್ ರಿಫಿಲ್ಲಿಂಗ್ ಮಾಡುವಾಗ ಉಂಟಾದ ಅನಿಲ ಸೋರಿಕೆಯಿಂದ ಅದು ಸ್ಫೋಟಗೊಂಡಿದೆ. ಆ ಸಂದರ್ಭದಲ್ಲಿ ಅಂಗಡಿ ಬಳಿ ಆಟವಾಡುತ್ತಿದ್ದ ಮಹೇಶ್ ದೇಹ ಸ್ಫೋಟದ ರಭಸಕ್ಕೆ ಛಿದ್ರಗೊಂಡಿದೆ.
ಮುಗಿಲು ಮುಟ್ಟಿದ ಪೋಷಕರ ಅಕ್ರಂದನ:ಕೂಡಲೇ ಸ್ಥಳೀಯರ ನೆರವಿನಿಂದ ಪೋಷಕರು ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವಿಗೀಡಾಗಿದ್ದಾನೆ. ಮಗನ ಮೃತದೇಹದ ಮುಂದೆ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಈ ಘಟನೆ ಬಳಿಕ ರಿಯಾಕತ್ ಎಸ್ಕೇಪ್ ಆಗಿದ್ದು, ಆತನ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಸಿಲಿಂಡರ್ ಸ್ಫೋಟ: ಕುಟುಂಬದ ಹತ್ತು ಜನರಿಗೆ ತೀವ್ರ ಗಾಯ: ಅಡುಗೆ ಅನಿಲ ಸೋರಿಕೆಯಿಂದ ಸಂಭವಿಸಿದ ಸ್ಫೋಟದಿಂದ ಒಂದೇ ಕುಟುಂಬದ ಹತ್ತು ಜನರು ಗಾಯಗೊಂಡಿದ್ದ ಘಟನೆ ಬೆಂಗಳೂರಿನ ರಾಜಾಜಿನಗರದ ಮರಿಯಪ್ಪನಪಾಳ್ಯದ ಮನೆಯೊಂದರಲ್ಲಿ ಇತ್ತೀಚೆಗೆ ನಡೆದಿತ್ತು. ಮನೆಯಲ್ಲಿದ್ದ ಎಲ್ಲರೂ ಗಾಯಗೊಂಡಿದ್ದರು, ಈ ಪೈಕಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು.