ಬೆಂಗಳೂರು : ಬೆಲೆ ಏರಿಕೆ ಸೇರಿದಂತೆ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಬುಧವಾರ ರಾಜ್ಯದ 224 ಕ್ಷೇತ್ರಗಳಲ್ಲಿ ಸೈಕಲ್ ಜಾಥಾ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.
ನಗರದ ಕ್ವೀನ್ಸ್ ರಸ್ತೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ 100 ನಾಟೌಟ್ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಈಗ ಬುಧವಾರ ಸೈಕಲ್ ಜಾಥಾ ಹಮ್ಮಿಕೊಂಡಿದ್ದೇವೆ. ರಾಜ್ಯದ ಎಲ್ಲ ಭಾಗಗಳಲ್ಲೂ 5 ಕಿ.ಮೀ ನಷ್ಟು ದೂರು ಸೈಕಲ್ ತುಳಿಯುವ ಮೂಲಕ ಈ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ತೈಲ ಬೆಲೆ ಇಳಿಸಿ ಜನಸಾಮಾನ್ಯರ ಮೇಲಿನ ಹೊರೆಯನ್ನ ತಪ್ಪಿಸಬೇಕು ಎಂದು ಆಗ್ರಹಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.
ಈ ಹಿಂದೆ ಬಿಜೆಪಿ ಪ್ರತಿಪಕ್ಷದ ಸ್ಥಾನದಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು, ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರದ ನಾಯಕರು ಬೀದಿಯಲ್ಲಿ ಸಿಲಿಂಡರ್ ತಲೆ ಮೇಲೆ ಇಟ್ಟುಕೊಂಡು ಹೋರಾಟ ಮಾಡಿದ್ದರು. ಆದರೆ, ಇಂದು ಅದೇ ನಾಯಕರು ಬಾಯಿ ಬಿಡುತ್ತಿಲ್ಲ. ವಾಜಪೇಯಿ ಅವರು ಒಮ್ಮೆ ಎತ್ತಿನಗಾಡಿಯಲ್ಲಿ ಸಂಸತ್‌ಗೆ ತೆರಳಿದ್ದರು. ಅವರು ಈ ಹಿಂದೆ ಏನು ಮಾಡಿದ್ದರು, ಈಗ ಅಧಿಕಾರಕ್ಕೆ ಬಂದ ಮೇಲೆ ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ಜನರಿಗೆ ತಿಳಿಸಬೇಕಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇಂಧನ ತೈಲ ಮೇಲೆ ಹಾಕಿರುವ ತೆರಿಗೆ ಇಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಕೋವಿಡ್ ಮೃತರಿಗೆ 5 ಲಕ್ಷ ಪರಿಹಾರ ನೀಡಬೇಕು. ಇನ್ನು, ಕೋವಿಡ್ 2ನೇ ಅಲೆಯಲ್ಲಿ ಸರ್ಕಾರ 30 ಸಾವಿರ ಜನ ಮೃತಪಟ್ಟಿರುವುದಾಗಿ ಸರ್ಕಾರ ಮಾಹಿತಿ ನೀಡಿದೆ. ಆದರೆ, ವಾಸ್ತವದಲ್ಲಿ ಅದರ ಹತ್ತು ಪಟ್ಟು ಅಂದರೆ, 3 ಲಕ್ಷಕ್ಕೂ ಹೆಚ್ಚು ಜನ ಕೋವಿಡ್‌ಗೆ ಬಲಿಯಾಗಿದ್ದಾರೆ. ರಾಜ್ಯ ಸರ್ಕಾರ ಮೃತಪಟ್ಟವರಿಗೆ 1 ಲಕ್ಷ ಪರಿಹಾರ ಘೋಷಿಸಿದ್ದು, ಕೇವಲ ಬಿಪಿಎಲ್ ಕಾರ್ಡುದಾರರಿಗೆ ಮಾತ್ರ ಎಂದು ಹೇಳಿದೆ. ಸುಪ್ರೀಂಕೋರ್ಟ್ ಪರಿಹಾರ ನೀಡುವ ವಿಚಾರವಾಗಿ ಎಲ್ಲ ರಾಜ್ಯಗಳಿಗೂ ಮಾರ್ಗಸೂಚಿ ನಿರ್ಮಿಸುವಂತೆ ಸೂಚನೆ ನೀಡಿದೆ. ಕೋವಿಡ್ ಸಂತ್ರಸ್ತರಿಗೆ ₹1 ಲಕ್ಷ ಪರಿಹಾರ ನೀಡಿದರೆ ಪ್ರಯೋಜನವಿಲ್ಲ. ಹೀಗಾಗಿ, ಬಿಪಿಎಲ್ ಕಾರ್ಡು ಇಲ್ಲದವರು ಸೇರಿದಂತೆ ಕೋವಿಡ್‌ನಿಂದ ಮೃತಪಟ್ಟ ಎಲ್ಲರಿಗೂ ₹5 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕೋವಿಡ್ ಬಂದು ನಂತರ ನೆಗೆಟಿವ್ ಆಗಿ ಮೃತಪಟ್ಟಿರುವವರು ಇದ್ದಾರೆ, ಇವರಿಗೆ ಪರಿಹಾರ ನೀಡದೆ ಕೇವಲ ಕಾಟಾಚಾರಕ್ಕೆ ಸರ್ಕಾರ ಪರಿಹಾರ ಘೋಷಿಸಿದೆ. ಕೋವಿಡ್‌ನಿಂದ ಆಗಿರುವ ಸಾವು- ನೋವುಗಳನ್ನು ಕಾಂಗ್ರೆಸ್ ಪಕ್ಷದಿಂದ ಡೆತ್ ಆಡಿಟ್ ಮಾಡಲು ಮುಂದಾಗಿದ್ದೇವೆ. ಜಿಲ್ಲಾ, ತಾಲೂಕು ಕೇಂದ್ರಗಳು ಹಾಗೂ ಗ್ರಾಮಗಳಿಗೆ ಕಾರ್ಯಕರ್ತರು ಹೋಗಿ ಕೋವಿಡ್‌ನಿಂದ ಸತ್ತವರ ಮಾಹಿತಿ ಕಲೆ ಹಾಕುತ್ತಾರೆ. ರಾಜ್ಯ ಸರ್ಕಾರ ಘೋಷಿಸಿರುವ ಕೋವಿಡ್ ಪರಿಹಾರ ಪ್ಯಾಕೇಜ್ ಯಾರಿಗೂ ಸರಿಯಾಗಿ ತಲುಪಿಲ್ಲ. ಬೀದಿ ಬದಿ ವ್ಯಾಪಾರಿ, ಅಸಂಘಟಿತ ಕಾರ್ಮಿಕರಿಗೆ 2 ಸಾವಿರ, ಕಟ್ಟಡ ಕಾರ್ಮಿಕರಿಗೆ 3 ಸಾವಿರ, ಚಾಲಕರಿಗೆ 3 ಸಾವಿರ ಘೋಷಿಸಿದ್ದಾರೆ.
ಕಳೆದ ವರ್ಷವೂ ಸರ್ಕಾರ ಪರಿಹಾರ ಘೋಷಿಸಿತ್ತು. ಆದರೆ, 10 ಲಕ್ಷ ಚಾಲಕರಲ್ಲಿ ಪರಿಹಾರ ಸಿಕ್ಕಿದ್ದು ಕೇವಲ 2.5 ಲಕ್ಷ ಚಾಲಕರಿಗೆ ಮಾತ್ರ. ಬೀದಿ ಬದಿ ವ್ಯಾಪಾರಿಗಳು, ಅಸಂಘಟಿತ ಕಾರ್ಮಿಕರ ಬಗ್ಗೆ ಸರ್ಕಾರದ ಬಳಿ ಸ್ಪಷ್ಟ ಮಾಹಿತಿ ಇಲ್ಲ. ಇನ್ನು, ಕಟ್ಟಡ ಕಾರ್ಮಿಕರಿಗೆ ಯಾರ ಬಳಿ ಕಾರ್ಡ್ ಇದೆಯೋ ಅವರಿಗೆ ಮಾತ್ರ ಪರಿಹಾರ ಸಿಗುತ್ತದೆ. ಹೀಗೆ ಶೇ.10ರಷ್ಟು ಜನರಿಗೆ ಮಾತ್ರ ಪರಿಹಾರ ಸಿಗುತ್ತದೆ. ಕೇವಲ ಕಣ್ಣೊರೆಸುವ ತಂತ್ರವಾಗಿ ಸರ್ಕಾರ ಪ್ಯಾಕೇಜ್ ಘೋಷಿಸಿದೆ’ ಎಂದು ಟೀಕಿಸಿದರು.
ಮನೆಮನೆಗೆ ತೆರಳಿ ಅರ್ಜಿ : ಈ ಕಾರ್ಮಿಕರಿಗೆ ಪರಿಹಾರ ಸಿಗುವಂತೆ ಮಾಡಲು ನಮ್ಮ ಕಾರ್ಯಕರ್ತರು ರಾಜ್ಯಾದ್ಯಂತ ಮನೆ ಮನೆಗೆ ಹೋಗಿ ಅವರ ಪರವಾಗಿ ಅರ್ಜಿ ಹಾಕುತ್ತಾರೆ. ರಾಜ್ಯ ಸರ್ಕಾರ ನೆರೆ ರಾಜ್ಯಗಳಲ್ಲಿ ಪರಿಹಾರ ಕೊಟ್ಟಿದ್ದನ್ನು ನೋಡಿಯಾದರೂ ನಮ್ಮ ರಾಜ್ಯದ ಜನರಿಗೆ ನೆರವಾಗಬೇಕಿತ್ತು. ನೆರೆ ರಾಜ್ಯಗಳಲ್ಲಿ ಸರ್ಕಾರದ ಘೋಷಣೆಗಳು ಕಾರ್ಯರೂಪಕ್ಕೆ ಬಂದರೆ, ನಮ್ಮ ರಾಜ್ಯದಲ್ಲಿ ಘೋಷಣೆಗಳು ಘೋಷಣೆಯಾಗಿಯೇ ಉಳಿದಿವೆ. ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡು ದಾರರಿಗೆ 75 ಕೆ.ಜಿಯಷ್ಟು ದಿನಸಿ ಕೊಡಬಹುದಿತ್ತು. ಇದಕ್ಕೆಕುಟುಂಬಕ್ಕೆ 4 ಸಾವಿರದಂತೆ ಖರ್ಚು ಮಾಡಿದ್ದರೂ ಹೆಚ್ಚೆಂದರೆ 440 ಕೋಟಿಯಷ್ಟು ಮಾತ್ರ ಖರ್ಚಾಗುತ್ತಿತ್ತು. ಇದರಿಂದ ರಾಜ್ಯದಲ್ಲಿ ಸುಮಾರು ಐದೂವರೆ ಕೋಟಿ ಜನರಿಗೆ ಅನುಕೂಲವಾಗುತ್ತಿತ್ತು ಎಂದರು.