ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಿವೆ. ಸದ್ಯ ನಗರದ ಇನ್ಫೆಂಟ್ರಿ ರಸ್ತೆಯ ಬಳಿ ಇರುವ ನಗರ ಪೊಲೀಸ್ ಆಯುಕ್ತ ಕಚೇರಿಯ ಆವರಣದಲ್ಲಿರುವ ಸೈಬರ್ ಪೊಲೀಸ್ ಠಾಣೆಯಲ್ಲಿ 17 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಆರೋಪಿಗಳ ಪತ್ತೆ ಮಾಡುವುದು ಸೈಬರ್ ಕ್ರೈಂ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಬೆಂಗಳೂರಿನಲ್ಲಿ ಹೆಚ್ಚಾಗಿ ಆನ್‌ಲೈನ್ ದೋಖಾ, ಒಎಲ್‌ಎಕ್ಸ್ ವಂಚನೆ, ಕ್ರೆಡಿಟ್ ಕಾರ್ಡ್-ಡೆಬಿಟ್ ಕಾರ್ಡ್ ವಂಚನೆ, ಒಟಿಪಿ ವಂಚನೆ, ಡಾರ್ಕ್ ವೆಬ್ ಫ್ರಾಡ್, ಉದ್ಯೋಗ ಕೊಡುವುದಾಗಿ ವಂಚನೆ, ಕ್ಯೂಆರ್ ಕೋಡ್ ಕಳುಹಿಸಿ ಅಕೌಂಟ್ನಿಂದ ಹಣ ಲಪಟಾಯಿಸುವುದು, ಮ್ಯಾಟ್ರಿಮೋನಿಯಲ್ ವಂಚನೆ.. ಹೀಗೆ ಹಲವಾರು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸೈಬರ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿವೆ. ಆದರೆ, ಈ ರೀತಿ ಕೆಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಡುವಂತಾಗಿದೆ.
ವಂಚಕರ ಪತ್ತೆಗಾಗಿ ಬಲೆಬೀಸಿರುವ ಸಿಸಿಬಿ:ಆನ್‌ಲೈನ್ ವಂಚಕರು ಅಪರಾಧ ಪ್ರಕರಣಗಳನ್ನು ಬೆಂಗಳೂರಿನಲ್ಲಿಯೇ ನಡೆಸಿ ನಂತರ ಹೊರ ರಾಜ್ಯ, ವಿದೇಶಗಳಿಗೆ ತೆರಳಿ ಅಲ್ಲಿಯೇ ತಲೆಮರೆಸಿಕೊಳ್ತಾರೆ. ಅಷ್ಟೇ ಅಲ್ಲ, ಎಲ್ಲೋ ಮೂಲೆಯಲ್ಲಿ ಕುಳಿತು ವಂಚನೆ ನಡೆಸುತ್ತಾರೆ. ಹೀಗಾಗಿ, ದಾಖಲಾದ ಸಾವಿರಕ್ಕೂ ಹೆಚ್ಚು ಪ್ರಕರಣಗಳ ತನಿಖೆ ನಡೆಸುತ್ತಿರುವ ಸೈಬರ್ ಇನ್ಸ್ಪೆಕ್ಟರ್ಗಳಾದ ಪ್ರಶಾಂತ್ ಬಾಬು, ಗಿರೀಶ್, ಹಜರೇಶ್ ನೇತೃತ್ವದ ತಂಡ ರಾಜಸ್ಥಾನ, ದೆಹಲಿ ಹೀಗೆ ಹಲವೆಡೆ ತೆರಳಿ ವಂಚಕರಿಗೆ ಬಲೆ ಬೀಸಿದೆ.
ಪತ್ತೆಯಾಗದೆ ಉಳಿದ 17 ಸಾವಿರ ಪ್ರಕರಣಗಳು:ನಗರದ ಸೈಬರ್ ಠಾಣೆಯಲ್ಲಿ ಈವರೆಗೆ ಸುಮಾರು 17 ಸಾವಿರಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗದೆ ಹಾಗೆಯೇ ಉಳಿದಿದೆ. ಆದರೆ, ದಿನೇದಿನೆ ಹಣ ಕಳೆದುಕೊಂಡವರ ಸಂಖ್ಯೆ ಮಾತ್ರ ಹೆಚ್ಚುತ್ತಿದೆ. ತನಿಖೆ ನಡೆಸಲು ಸಿಬ್ಬಂದಿ ಕೊರತೆ ಎದುರಾಗಿದೆ. ಸೈಬರ್ ಠಾಣೆಯಲ್ಲಿ ಓರ್ವ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, 40ಕ್ರೈಂ ಸಿಬ್ಬಂದಿಗಳಿದ್ದಾರೆ.