ಬೆಂಗಳೂರು:ಮುಂಬೈನಿಂದ ತೈವಾನ್ ದೇಶಕ್ಕೆ ಕೆಲವು ವಸ್ತುಗಳ ಅಕ್ರಮ ಪೂರೈಕೆಗೆ ಪಾಸ್‌ಪೋರ್ಟ್, ಆಧಾರ್ ಬಳಕೆಯಾಗಿದೆ ಎಂದು ಮುಂಬೈ ಪೊಲೀಸ್ ಡಿಸಿಪಿ ಸೋಗಿನಲ್ಲಿ ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ಒಬ್ಬರಿಗೆ ಸೈಬರ್ ವಂಚಕರು ಕರೆ ಮಾಡಿ, 33.24 ಲಕ್ಷ ರೂ. ಎಗರಿಸಿರುವ ಘಟನೆ ವರದಿಯಾಗಿದೆ.
ನಾಗನಾಥಪುರದ ನಿವಾಸಿ ದಿನೇಶ್ ಪಾಟಕ್ (39) ವಂಚನೆಗೊಳಗಾದ ಸಾಫ್ಟ್ವೇರ್ ಇಂಜಿನಿಯರ್. ಜೂನ್ 27ರಂದು ಘಟನೆ ನಡೆದಿದೆ. ದಿನೇಶ್ ಪಾಟಕ್ಗೆ ಅಪರಿಚಿತ ನಂಬರ್‌ನಿಂದ ಜೂನ್ 27 ರಂದು ಕರೆಗಳು ಬಂದಿವೆ. ಈ ವೇಳೆ ತಾವು ಫೆಡೆಕ್ಸ್ ಕೊರಿಯರ್‌ನವರು ಎಂದು ಪರಿಚಯಿಸಿಕೊಂಡ ವಂಚಕರು, "ಮುಂಬೈನಿಂದ ತೈವಾನ್‌ಗೆ ಅಕ್ರಮವಾಗಿ ಎಂಡಿಎಂ, ಲ್ಯಾಪ್‌ಟಾಪ್, ಬಟ್ಟೆಗಳ ಪಾರ್ಸೆಲ್ ರವಾನಿಸಲು ನಿಮ್ಮ ಪಾಸ್‌ಪೋರ್ಟ್ ಮತ್ತು ಆಧಾರ್ ಬಳಕೆಯಾಗಿದೆ" ಎಂದು ನಂಬಿಸಿದ್ದರು. ಬಳಿಕ ನಿಮ್ಮ ಕರೆಯನ್ನು ಮುಂಬೈ ಪೊಲೀಸರಿಗೆ ವರ್ಗಾವಣೆ ಮಾಡುವುದಾಗಿ ತಿಳಿಸಿ ಅಪರಿಚಿತ ನಂಬರ್‌ಗೆ ಕರೆ ವರ್ಗಾಯಿಸಿದ್ದರು. ವಂಚಕರ ಮಾತನ್ನು ನಂಬಿ ಇವರು ಮಾತು ಮುಂದುವರಿಸಿದ್ದರು.
ಮುಂಬೈ ಡಿಸಿಪಿ ಎಂದು ಹೇಳಿ ಮೋಸ:ಕರೆಯಲ್ಲಿ ಮಾತನಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ತಾವು ಮುಂಬೈ ಪೊಲೀಸ್ ಡಿಸಿಪಿ ಎಂದು ಹೇಳಿಕೊಂಡು ಮಾತನಾಡಿದ್ದ. ನಿಮ್ಮ ಹೆಸರಲ್ಲಿ ಅಕ್ರಮವಾಗಿ ವಸ್ತುಗಳು ರವಾನೆಯಾಗಿವೆ. ಆದ್ದರಿಂದ ನಿಮ್ಮ ವಿರುದ್ಧ ಮನಿ ಲಾಂಡರಿಂಗ್ ಕೇಸ್ ದಾಖಲಾಗುತ್ತದೆ ಎಂದು ಬೆದರಿಸಿ ಮೊಬೈಲ್‌ನಲ್ಲಿ ಸ್ಕೈಪ್ ಆ್ಯಪ್ ಡೌನ್‌ಲೋಡ್ ಮಾಡಲು ಸೂಚಿಸಿದ್ದರು. ಇವರ ಮಾತು ಕೇಳಿ ಹೆದರಿದ ಟೆಕ್ಕಿ, ಸ್ಕೈಪ್ ಡೌನ್‌ಲೋಡ್ ಮಾಡಿದರು. ಬಳಿಕ ಸ್ಕೈಪ್‌ನಲ್ಲಿ ಕರೆ ಮಾಡಿದ ವಂಚಕರು, ವೆರಿಫಿಕೇಶನ್ ಮಾಡಬೇಕಾಗಿದೆ ಎಂದು ಹೇಳಿದ್ದ. ನಿಜವೆಂದು ನಂಬಿದ ದಿನೇಶ್ ಪಾಟಕ್, ವೆರಿಫಿಕೇಷನ್ ಎಂದು ತಮ್ಮ ಆಧಾರ್ ಕಾರ್ಡ್ ನಂಬರ್, ಫೋಟೊ, ಬ್ಯಾಂಕ್ ದಾಖಲೆಗಳನ್ನು ನೀಡಿದ್ದರು.