ಬೆಂಗಳೂರು: ಆನ್‍ಲೈನ್ ಮೂಲಕ ವೈನ್ ಬಾಟಲಿ ಖರೀದಿಸಿದ್ದ ನಿವೃತ್ತ ಸರ್ಕಾರಿ ಅಧಿಕಾರಿಗೆ ಸೈಬರ್ ಖದೀಮನೊಬ್ಬ 1.79 ಲಕ್ಷ ರೂ. ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. ಅಲಿ ಅಸ್ಗರ್ ರಸ್ತೆಯ ದಿ ಎಂಬೆಸ್ಸಿ ಅಪಾರ್ಟ್‍ಮೆಂಟ್‍ನಲ್ಲಿ ನೆಲೆಸಿರುವ 80 ವರ್ಷದ ನಿವೃತ್ತ ಅಧಿಕಾರಿ ವಂಚನೆಗೆ ಒಳಗಾಗಿದ್ದಾರೆ.
ಘಟನೆಯ ವಿವರ:
ಆಗಸ್ಟ್ 19ರಂದು ವಿಭೂತಿಪುರದ ಕ್ರಿಸ್ಟಲ್ ವೈನ್ಸ್ ಪೋರ್ಟಲ್ನಲ್ಲಿ ನಿವೃತ್ತ ಅಧಿಕಾರಿಯು 1 ವೈನ್ ಬಾಟಲ್ ಮತ್ತು 1 ಪ್ಯಾಕೇಟ್ ಸಿಗರೇಟ್ ಆರ್ಡರ್ ಮಾಡಿದ್ದಾರೆ. ಇದರ ಒಟ್ಟಾರೆ ಬಿಲ್ 730 ರೂ. ಆಗಿತ್ತು. ಈ ಸಂದರ್ಭದಲ್ಲಿ ಫೋನ್ ಕರೆ ಮಾಡಿದ ಅಪರಿಚಿತ ವ್ಯಕ್ತಿ ವೈನ್ ಶಾಪ್ ನೌಕರ ನೀಲೇಶ್ ಚೌಧರಿ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ನಿವೃತ್ತ ಅಧಿಕಾರಿಯು ಪೇಟಿಎಂನಲ್ಲಿ ಬಿಲ್ ಪಾವತಿಗೆ ಮುಂದಾದಾಗ ನೀಲೇಶ್ ಪೇಟಿಎಂ ಸೇವೆ ಇಲ್ಲ. ಕ್ರೆಡಿಟ್ ಕಾರ್ಡ್‍ನಲ್ಲಿ ಪಾವತಿ ಮಾಡುವಂತೆ ಸೂಚಿಸಿದ್ದ. ಅದಕ್ಕೆ ಒಪ್ಪಿದಾಗ ಕ್ರೆಡಿಟ್ ಕಾರ್ಡ್ ನಂಬರ್ ಕೇಳಿ 99,860 ರೂ. ಮತ್ತು 31,000 ರೂ.ನ್ನು ವರ್ಗಾವಣೆ ಮಾಡಿಕೊಂಡಿದ್ದಾನೆ.
ಇದರಿಂದ ಗಾಬರಿಗೊಂಡ ಗ್ರಾಹಕ, ನೀಲೇಶ್‍ಗೆ ಮತ್ತೆ ಕರೆ ಮಾಡಿ ಪ್ರಶ್ನಿಸಿದರು. ಆಗ ಆತ, "ನಾನು ಮದ್ಯ ಸೇವನೆ ಮಾಡಿದ್ದು, ಗೊತ್ತಾಗದೆ ತಪ್ಪು ನಂಬರ್ ಒತ್ತಿದ್ದೇನೆ. ನಿಮ್ಮ ಬೇರೆ ಕ್ರೆಡಿಟ್ ಕಾರ್ಡ್ ನಂಬರ್ ಹೇಳಿ ವಾಪಸ್ ಹಣ ಕಳುಹಿಸುತ್ತೇನೆ" ಎಂದು ಪುಸಲಾಯಿಸಿದ್ದಾನೆ. ಇದನ್ನು ನಂಬಿದ ನಿವೃತ್ತ ಅಧಿಕಾರಿ ಮತ್ತೊಂದು ಕಾರ್ಡ್ ನಂಬರ್ ಕೊಟ್ಟಿದ್ದಾರೆ. ಆ ಸಂದರ್ಭದಲ್ಲಿ ಖದೀಮ ಅದರಲ್ಲಿಯೂ 19,190 ರೂ. ಮತ್ತು 29,280 ರೂ. ಮೊತ್ತವನ್ನು ಹಂತ ಹಂತವಾಗಿ ವರ್ಗಾವಣೆ ಮಾಡಿಕೊಂಡು ಸಂಪರ್ಕ ಕಡಿತಗೊಳಿಸಿದ್ದಾನೆ.
ಕೊನೆಗೆ ವಂಚನೆಗೊಳಗಾದ ನಿವೃತ್ತ ಅಧಿಕಾರಿ ಕೇಂದ್ರ ವಿಭಾಗದ ಸಿಇಎನ್ ಕ್ರೈಮ್ ಠಾಣೆಯಲ್ಲಿ ದೂರು ನೀಡಿದ್ದಾರೆ.