ಬೆಂಗಳೂರು : ನಗರದಲ್ಲಿ ದಿನೇ ದಿನೇ ಸೈಬರ್ ವಂಚನೆಯ ಪ್ರಕರಣಗಳು ಬೆಳಕಿಗೆ ಬರುತ್ತನೇ ಇವೆ. ವಿವಿಧ ಜಾಲಗಳ ಮೂಲಕ ವಂಚಕರು ಅಮಾಯಕರ ಖಾತೆಯಿಂದ ಹಣ ಎಗಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಸೇನಾ ವಾಹನದಲ್ಲಿ ಕಾರು ಕಳುಹಿಸುವುದಾಗಿ ಹೇಳಿ ಹಣ ಲಪಟಾಯಿಸಿದ ಸೈಬರ್ ಖದೀಮ - ಬೆಂಗಳೂರು ಸೈಬರ್ ವಂಚನೆ
ಸೇನಾ ವಾಹನದಲ್ಲಿ ಮನೆ ಬಾಗಿಲಿಗೆ ಕಾರು ಕಳುಹಿಸುವುದಾಗಿ ನಂಬಿಸಿದ ಸೈಬರ್ ಖದೀಮನೊಬ್ಬ ವ್ಯಕ್ತಿಯೊಬ್ಬರಿಂದ ಸಾವಿರಾರು ರೂಪಾಯಿ ಲಪಟಾಯಿಸಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ಇದೀಗ ಸೇನಾ ಟ್ರಕ್ನಲ್ಲಿ ಮನೆಗೆ ಕಾರು ಕಳುಹಿಸುವುದಾಗಿ ವ್ಯಕ್ತಿಯೊಬ್ಬರಿಗೆ ಸೈಬರ್ ಖದೀಮನೊಬ್ಬ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಕಗ್ಗದಾಸಪುರ ನಿವಾಸಿ ಮೂರ್ತಿ ವಂಚನೆಗೊಳಗಾದವರು. ಮೂರ್ತಿ, ಆನ್ಲೈನ್ ಮಾರಾಟ ತಾಣ Olxನಲ್ಲಿ ಹುಂಡೈ ಐ 20 ಕಾರು ಮಾರಾಟವಿದೆ ಎಂಬ ಪೋಸ್ಟ್ ನೋಡಿದ್ದರು. ಈ ಕಾರು ಖರೀದಿಸಲು ಅಲ್ಲಿ ಹಾಕಲಾಗಿದ್ದ ಕಾರು ಮಾಲೀಕ ಸಚಿನ್ ಸಿಂಗ್ ಬಲ್ಲಾ ಎಂಬಾತನ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದರು.
ಈ ವೇಳೆ ಕರೆ ಸ್ವೀಕರಿಸಿ ಮಾತನಾಡಿದ ವ್ಯಕ್ತಿ, ತಾನು ಮೈಸೂರಿನ ಸೇನಾ ಕಚೇರಿಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದೇನೆ. 1.20 ಲಕ್ಷ ರೂ ನೀಡಿದರೆ ಸೇನಾ ಟ್ರಕ್ ಮೂಲಕವೇ ಮನೆ ಬಳಿಗೆ ಕಾರು ತಂದು ಕೊಡಲಾಗುವುದು ಎಂದು ತಿಳಿಸಿದ್ದಾನೆ. ಜೊತೆಗೆ ಕಾರಿನ ದಾಖಲೆಗಳನ್ನೂ ತೋರಿಸಿದ್ದ. ಇದನ್ನು ನಂಬಿದ ಮೂರ್ತಿ ಆತನ ಖಾತೆಗೆ ಹಂತ ಹಂತವಾಗಿ ಹಣ ಪಾವತಿ ಮಾಡಿದ್ದರು. ಹೀಗೆ ಒಟ್ಟು 42 ಸಾವಿರ ರೂ. ಆತನ ಖಾತೆಗೆ ಜಮೆ ಮಾಡಿದ್ದಾರೆ. ಆದರೆ ಆ ಬಳಿಕ ಕಾರು ಮಾಲೀಕನೆಂದು ಹೇಳಿಕೊಂಡ ವ್ಯಕ್ತಿ ವಂಚಕ ಎಂಬುವುದು ಮೂರ್ತಿಯವರಿಗೆ ಗೊತ್ತಾಗಿದೆ. ಸದ್ಯ, ಅವರು ವೈಟ್‌ಫೀಲ್ಡ್ ವಿಭಾಗದ ಸಿಎಎನ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.