ನವದೆಹಲಿ/ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಮತ್ತೊಮ್ಮೆ ಆಘಾತ ಎದುರಾಗಿದೆ. ನವೆಂಬರ್ 1ರಿಂದ ನವೆಂಬರ್ 15ರವರೆಗೆ ತಮಿಳುನಾಡಿಗೆ ಪ್ರತಿದಿನ 2,600 ಕ್ಯೂಸೆಕ್ ನೀರು ಬಿಡಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ಕರ್ನಾಟಕಕ್ಕೆ ಆದೇಶ ನೀಡಿದೆ. ಈ ಹಿಂದೆ ಕಾವೇರಿ ನೀರು ನಿರ್ವಹಣಾ ಮಂಡಳಿ ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ತಿಳಿಸಿತ್ತು. ಅಕ್ಟೋಬರ್ 16ರಿಂದ ಅಕ್ಟೋಬರ್ 31ರವರೆಗೆ ನೀರು ಹರಿಸುವಂತೆ ತಿಳಿಸಲಾಗಿತ್ತು.
ದೆಹಲಿಯಲ್ಲಿ ಇಂದು ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಜಲಸಂಪನ್ಮೂಲ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಎಸಿಎಸ್ ರಾಕೇಶ್ ಸಿಂಗ್ ಸಭೆಯಲ್ಲಿ ಕರ್ನಾಟಕದ ಪರ ವಾದ ಮಂಡಿಸಿದರು. ನಾಲ್ಕು ಜಲಾಶಯಗಳಿಗೆ ಬಹುತೇಕ ಶೂನ್ಯ ಒಳಹರಿವಿರುವ ಕಾರಣ, ಕರ್ನಾಟಕ ತನ್ನ ಜಲಾಶಯಗಳಿಂದ ನೀರು ಬಿಡಲು ಸಾಧ್ಯವಾಗುವುದಿಲ್ಲ ಎಂದು ಕಾವೇರಿ ನೀರು ನಿರ್ವಹಣಾ ಮಂಡಳಿಗೆ ವರದಿ ಸಲ್ಲಿಸುವಂತೆ, ಕಾವೇರಿ ನೀರು ನಿಯಂತ್ರಣಾ ಸಮಿತಿಗೆ ಮನವಿ ಸಲ್ಲಿಸಿದೆ.
ಇನ್ನೊಂದೆಡೆ, ಇದೇ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ತಮಿಳುನಾಡು ಸರ್ಕಾರ ಮುಂದಿನ 15 ದಿನಗಳವರೆಗೆ ಕರ್ನಾಟಕ 13,000 ಕ್ಯೂಸೆಕ್ ನೀರು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿತ್ತು. ಆದರೆ ಸಿಡಬ್ಲ್ಯೂಆರ್‌ಸಿ ಕರ್ನಾಟಕ ತನ್ನ ಜಲಾಶಯಗಳಿಂದ 2,600 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಆದೇಶಿಸಿದೆ. ಪ್ರತಿ ಬಾರಿ ಸಭೆ ನಡೆದಾಗಲೂ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ನೀಡುತ್ತಿದೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಮೂಲಕ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶವನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ರಾಜ್ಯ ಸರ್ಕಾರದ ನಡೆ ವಿರೋಧಿಸಿ, ಕಾವೇರಿ ಜಲಾನಯದ ಪ್ರದೇಶಗಳಾದ ಮಂಡ್ಯ, ಮೈಸೂರು ಸೇರಿದಂತೆ ಹಲವೆಡೆ ರೈತರು, ವಿವಿಧ ಸಂಘಟನೆಗಳು ಮಾತ್ರವಲ್ಲದೆ ವಿರೋಧ ಪಕ್ಷಗಳು ಸಹಿತ ಪ್ರತಿಭಟನೆ, ಧರಣಿ ನಡೆಸುತ್ತಿವೆ. ತಮಿಳುನಾಡಿನಲ್ಲಿ ಉತ್ತಮ ಹಿಂಗಾರು ಮಳೆಯಾಗುತ್ತಿದೆ. ಜಲಾಶಯಗಳು ತುಂಬುತ್ತಿವೆ. ಆದರೂ ಅವುಗಳನ್ನು ಯಾವುದನ್ನೂ ಪರಿಗಣಿಸದೆ ಸಮಿತಿ ಮತ್ತೆ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 2,600 ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಿರುವುದು ಮತ್ತೆ ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಮಂಡ್ಯದಲ್ಲಿ ಕಾವೇರಿ ನೀರಿಗಾಗಿ ಹೋರಾಟ.. ಧರಣಿಯಲ್ಲಿ ಹೆಚ್ ವಿಶ್ವನಾಥ್ ಭಾಗಿ, ಪ್ರತಿಭಟನಾಕಾರರಿಗೆ ಬೆಂಬಲ