ಬೆಂಗಳೂರು/ನವದೆಹಲಿ: ರಾಜ್ಯದಲ್ಲಿ ಮಳೆ ಕೊರತೆಯಿಂದ ಬರಗಾಲದ ಕರಿಛಾಯೆ ಆವರಿಸಿರುವ ನಡುವೆ ಕಾವೇರಿ ನೀರು ನಿರ್ವಹಣಾ ಮಂಡಳಿಯಿಂದ ಮತ್ತೊಂದು ಶಾಕ್ ಎದುರಾಗಿದೆ. ಮಂಡ್ಯದ ಕೆಆರ್ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ಅಕ್ಟೋಬರ್ 31 ರವರೆಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಇಂದು ಮತ್ತೊಮ್ಮೆ ಆದೇಶ ನೀಡಿದೆ.
ನವದೆಹಲಿಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಕಾವೇರಿ ನೀರು ನಿರ್ವಹಣಾ ಮಂಡಳಿ ಸಭೆ ನಡೆಸಿತು. ಕಳೆದೆರಡು ದಿನಗಳ ಹಿಂದೆ (ಅಕ್ಟೋಬರ್ 11) ನಡೆದ ಸಭೆಯಲ್ಲೂ ತಮಿಳುನಾಡಿಗೆ 3,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಿತ್ತು. ಇದು ಭಾರಿ ವಿರೋಧಕ್ಕೆ ಕಾರಣವಾಗಿತ್ತು.
ನೀರು ನಿರ್ವಹಣಾ ಮಂಡಳಿಯ ಇಂದಿನ ಆದೇಶಕ್ಕೂ ಮುನ್ನ ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈ ಮುರುಗನ್ ಅವರು, ಸಿಡಬ್ಲ್ಯುಎಂಎ ಸಭೆಯಲ್ಲಿ ಕಾವೇರಿ ನದಿಯಿಂದ 16,000 ಕ್ಯೂಸೆಕ್ ನೀರನ್ನು ಕರ್ನಾಟಕ್ಕೆ ಬಿಡುವಂತೆ ತಮ್ಮ ಸರ್ಕಾರ ಒತ್ತಾಯಿಸಲಿದೆ ಎಂದು ಹೇಳಿದ್ದರು.
ಮಂಡ್ಯದಲ್ಲಿ ರಸ್ತೆ ತಡೆ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹೋರಾಟಗಾರರು, ಮಂಡ್ಯದಲ್ಲಿ ರಸ್ತೆ ತಡೆ ನಡೆಸಿದರು. ನಗರದ ಸರ್ಎಂವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಭಾರತೀಯ ವೈದ್ಯಕೀಯ ಸಂಘದ ವೈದ್ಯರು, ರೈತರು, ದಲಿತ, ಕನ್ನಡಪರ ಹೋರಾಟಗಾರರು ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು.
ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಸಮಿತಿಯ ಸುನಂದಾ ಜಯರಾಂ ಮಾತನಾಡಿ, "ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚಿಸಿದ್ದಂತೆ ಪ್ರತಿನಿತ್ಯ 3,000 ಕ್ಯೂಸೆಕ್ನಂತೆ 15 ದಿನಗಳ ಕಾಲ ನೀರು ಹರಿಸುವಂತೆ ಪ್ರಾಧಿಕಾರ ಆದೇಶ ಮಾಡಿರುವುದು ರೈತರ ಕತ್ತು ಕುಯ್ಯುವ ಕೆಲಸ. ಇಲ್ಲದ ನೀರನ್ನು ಬಿಡುವುದು ಹೇಗೆ?. ತಮಿಳುನಾಡು ನೀರಿನ ಹಕ್ಕು ಸ್ಥಾಪಿಸಿ ಏಕಮುಖ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಅದೇ ರೀತಿ ರಾಜ್ಯ ಸರ್ಕಾರ ನಿರಂತರವಾಗಿ ನೀರು ಹರಿಸುತ್ತಿರುವುದು ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಪ್ರಾಧಿಕಾರದ ಆದೇಶ ತಿರಸ್ಕರಿಸಿ ನೀರು ಸ್ಥಗಿತ ಮಾಡಬೇಕು" ಎಂದು ಒತ್ತಾಯಿಸಿದರು.
"ಕಳೆದ 40 ದಿನದಿಂದ ರಾಜ್ಯದಲ್ಲಿ ಪ್ರತಿನಿತ್ಯ ಹೋರಾಟ ನಡೆಯುತ್ತಾ ಬಂದಿದೆ. ಆದರೆ ಸರ್ಕಾರ ನಿರ್ಲಕ್ಷ್ಯ ತೋರಿದೆ. ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದೇವೆ ಎಂದು ಹೇಳುತ್ತಾರೆ. ಆದರೆ ಜನತೆಗೆ ಅದರ ಬಗ್ಗೆ ಏನಾಯಿತು ಎಂಬ ಬಗ್ಗೆ ಮಾಹಿತಿ ನೀಡುತ್ತಿಲ್ಲ. ರಾಜಕೀಯ ಸ್ವಾರ್ಥದಿಂದ ಜಲಾಶಯಗಳಿಂದ ಮಾತ್ರ ತಮಿಳುನಾಡಿಗೆ ನಿರಂತರ ನೀರು ಹರಿಸುತ್ತಿದೆ. ಸ್ವಾರ್ಥ ರಾಜಕಾರಣವನ್ನು ನಿಲ್ಲಿಸಿ, ರಾಜ್ಯದ ಜನತೆ ಮತ್ತು ರೈತರ ಹಿತ ಕಾಪಾಡಲು ಮುಂದಾಗಬೇಕು" ಎಂದು ಆಗ್ರಹಿಸಿದರು.
"ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಬೆಂಗಳೂರಿನಲ್ಲಿ ಕುಳಿತು ಏನು ಮಾಡುತ್ತಿದ್ದಾರೆ. ದೆಹಲಿಗೆ ಹೋಗಿ ಪ್ರಧಾನಿ ಮತ್ತು ರಾಷ್ಟ್ರಪತಿಯವರನ್ನು ಭೇಟಿಯಾಗಲಿ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರ ಅಹವಾಲು ಆಲಿಸಲೇಬೇಕು. ಸುಮ್ಮನೆ ಭೇಟಿಗೆ ಅವಕಾಶ ನೀಡಿಲ್ಲ ಎಂದು ಕಾಲಹರಣ ಮಾಡುವುದನ್ನು ಬಿಡಿ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಸಂಸದರು ಎಲ್ಲಿ ಹೋಗಿದ್ದಾರೆ?. ಮಂಡ್ಯ ಸಂಸದರ ಸಾರಥ್ಯದಲ್ಲಿ ಪ್ರಧಾನಿಗಳನ್ನು ಭೇಟಿಯಾಗಿ, ಇಲ್ಲವೇ ರಾಷ್ಟ್ರಪತಿ ಬಳಿಯಾದರೂ ಹೋಗಿ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡಲು ಮುಂದಾಗಿ" ಎಂದು ಆಗ್ರಹಿಸಿದರು.
ಭಾರತೀಯ ವೈದ್ಯಕೀಯ ಸಂಘದ ಡಾ. ಜಗದೀಶ್ ಭಾರತೀಯ ವೈದ್ಯಕೀಯ ಸಂಘದ ಡಾ. ಜಗದೀಶ್ ಮಾತನಾಡಿ, "ಕರ್ನಾಟಕದ ಜನತೆಗೆ ಕುಡಿಯುವ ನೀರು ಉಳಿಸಿಕೊಳ್ಳಲು ಹೋರಾಟ ನಡೆಯುತ್ತಿದೆ. ಆದರೆ ತಮಿಳುನಾಡಿಗೆ ಮೂರನೇ ಬೆಳೆ ಬೆಳೆಯಲು ನೀರು ಬಿಡಲಾಗುತ್ತಿದೆ. ಪ್ರಾಣಿ ಪಕ್ಷಿಗಳು, ಜನ ಜಾನುವಾರುಗಳಿಗೆ ಕುಡಿಯುವ ನೀರು ಉಳಿಸಲು ಪ್ರಾಧಿಕಾರದ ಆದೇಶವನ್ನು ಧಿಕ್ಕರಿಸಿ ಜಲಾಶಯಗಳಿಂದ ಹರಿಯುತ್ತಿರುವ ನೀರು ನಿಲ್ಲಿಸಿ" ಎಂದು ಒತ್ತಾಯಿಸಿದರು. ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಬೇಕ್ರಿ ರಮೇಶ್ ನೇತೃತ್ವವಹಿಸಿದ್ದರು.
ಇದನ್ನೂ ಓದಿ:ಕಾವೇರಿ ಜಲ ವಿವಾದ; ಸಿಡಬ್ಲ್ಯುಆರ್‌ಸಿ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ ಎಂದ ಡಿಸಿಎಂ ಡಿಕೆಶಿ