ಬೆಂಗಳೂರು: ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ತಮಿಳುನಾಡು ಬೇಡಿಕೆಯನ್ನು ತಿರಸ್ಕಾರ ಮಾಡಿದ್ದು, ನನಗೆ ಸಂತೋಷ ತಂದಿದೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ತಮಿಳುನಾಡು 12 ಸಾವಿರ ಕ್ಯೂಸೆಕ್ ಕೇಳಿತ್ತು. ರಾಜ್ಯದ ಜನತೆಯ ಹೋರಾಟಕ್ಕೆ ಬೆಲೆ ಸಿಕ್ಕಿದೆ. ಮಾಮೂಲಿ 2,000 ಕ್ಯೂಸೆಕ್ ಹೋಗ್ತಾ ಇರುತ್ತೆ. ಇನ್ನೊಂದು 1-2 ಸಾವಿರ ಕ್ಯೂಸೆಕ್ ನೀರು ಬಿಡಬೇಕಾಗುತ್ತದೆ. ಒಳ ಹರಿವು ಚೆನ್ನಾಗಿದೆ. CWRC ತಮಿಳುನಾಡು ಅರ್ಜಿ ತಿರಸ್ಕಾರ ಬಹಳ ಸಂತೋಷ ತಂದಿದೆ ಎಂದು ತಿಳಿಸಿದರು.
ತಮಿಳುನಾಡು ಸರ್ಕಾರ ಹನ್ನೆರಡು ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಕೇಳಿತ್ತು. 12 ಸಾವಿರ ಕ್ಯೂಸೆಕ್ ಬಿಡಲು ಆಗಲ್ಲ ಎಂದು ಸಮಿತಿ ಆದೇಶ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಎರಡು ಸಾವಿರ ಕ್ಯೂಸೆಕ್ ಹೋಗುತ್ತಿರುತ್ತದೆ. ಇನ್ನೊಂದು ಸಾವಿರ ಬಿಡುಬೇಕಾಗುತ್ತದೆ ಅಷ್ಟೇ. ಕನಕಪುರ, ಬೆಂಗಳೂರಿನಲ್ಲಿ ಆಗುವ ಮಳೆಗೆ ನೀರು ಹೋಗ್ತಾ ಇರುತ್ತದೆ. ನಿನ್ನೆ, ಮೊನ್ನೆ, ಬೆಳಗ್ಗೆಯಿಂದ ಒಳಹರಿವು ಚೆನ್ನಾಗಿದೆ ಎಂದು ಸ್ಪಷ್ಟಪಡಿಸಿದರು.
ಇನ್ನು ಮುಂದೆ ಬಂದ್ ಅವಶ್ಯಕತೆ ಇಲ್ಲ: ಪ್ರತಿಭಟನಾಕಾರರು ತಮ್ಮ ನೋವು, ದುಗುಡ ವ್ಯಕ್ತಪಡಿಸಿದ್ದಾರೆ. ಇವತ್ತು ಎಲ್ಲವೂ ಶಾಂತಿಯುತವಾಗಿ ನಡೆದಿದೆ. ಇನ್ಮುಂದೆ ಬಂದ್ ಅವಶ್ಯಕತೆ ಇಲ್ಲ. ಕೋರ್ಟ್ ಸಹ ಅನುಮತಿ ಕೊಡುವುದಿಲ್ಲ. ಯಾರೇ ಆಗಲಿ ಪ್ರಾಪರ್ಟಿ ಹಾಳು ಮಾಡುವುದಕ್ಕೆ ಹೋದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಯಾರೇ ಮಾಡಿದ್ರೂ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಕಾನೂನು ಕೈಗೆ ತೆಗೆದುಕೊಳ್ಳಬಾರದು. ಯಾರೇ ಮಾಡಲಿ, ಶಾಸಕರೇ ಮಾಡಲಿ ಕ್ರಮ ಆಗುತ್ತೆ. ಯಾರ್ಯಾರು ಶಾಂತಿಯುತವಾಗಿ ಹೋರಾಟ ಮಾಡಿದ್ದೀರಿ ಅವರಿಗೆ ಅಭಿನಂದನೆಗಳು. ಇವತ್ತು ನಮ್ಮ ಅಧಿಕಾರಿಗಳು ಹೋಗುತ್ತಿದ್ದಾರೆ. ಇನ್ನೊಂದು ಸಭೆಯಿದೆ, ವಾಸ್ತವಾಂಶ ತಿಳಿಸಲಿದ್ದಾರೆ. ನಾವು ನೀವು, ಹೋರಾಟಗಾರರು ಸೇರಿ ಮಳೆಗೆ ಪ್ರಾರ್ಥನೆ ಮಾಡೋಣ. ಭಗವಂತ, ವರುಣಕ್ಕಾಗಿ ಬಳಿ ಪ್ರಾರ್ಥನೆ ಮಾಡೋಣ ಎಂದು ಮನವಿ ಮಾಡಿದರು.