ದೇವನಹಳ್ಳಿ: ಕಳೆದ ಎರಡು ದಿನಗಳ ಕಾರ್ಯಾಚರಣೆಯಲ್ಲಿ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಮೂವರು ಪ್ರಯಾಣಿಕರಿಂದ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಒಂದು ಕೋಟಿ ಮೌಲ್ಯದ 1.7 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಸಿಂಗಾಪುರ ಏರ್ಲೈನ್ಸ್ನ ಎಸ್ ಕ್ಯೂ-510 ವಿಮಾನದಲ್ಲಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನನ್ನು ತಪಾಸಣೆ ನಡೆಸಿ ವಿಚಾರಣೆ ನಡೆಸಿದ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಅಕ್ರಮವಾಗಿ ಚಿನ್ನ ಸಾಗಣಿಕೆಯ ಯತ್ನವನ್ನ ಬಯಲಿಗೆಳೆದಿದ್ದಾರೆ. ಆರೋಪಿ ಶೂ ಮತ್ತು ಪ್ಯಾಂಟ್ನಲ್ಲಿ ಮರೆಮಾಚಿ ಚಿನ್ನವನ್ನ ಸಾಗಿಸುತ್ತಿದ್ದ, ಮತ್ತು 4 ಲ್ಯಾಪ್ ಟ್ಯಾಪ್ಗಳ ಕಳ್ಳ ಸಾಗಣಿಕೆ ಸಹ ಮಾಡುತ್ತಿದ್ದ, ಆರೋಪಿಯಿಂದ 0.945 ಕೆಜಿ ಚಿನ್ನವನ್ನ ಜಪ್ತಿ ಮಾಡಲಾಗಿದೆ.
ಮತ್ತೊಬ್ಬ ಭಾರತೀಯ ಪ್ರಯಾಣಿಕ ಕುವೈತ್ ನಿಂದ ಜಜೀರಾ ಏರ್ಲೈನ್ಸ್ನಲ್ಲಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ತಪಾಸಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯಿಂದ 689.95 ಗ್ರಾಂ ಚಿನ್ನವನ್ನ ಜಪ್ತಿ ಮಾಡಿದ್ದಾರೆ. ಶ್ರೀಲಂಕಾ ಪ್ರಯಾಣಿಕನೊಬ್ಬ ಶ್ರೀಲಂಕಾ ಏರ್ಲೈನ್ಸ್ ಮೂಲಕ ಕೆಐಎಎಲ್ಗೆ ಬಂದಿಳಿದಿದ್ದು, ಆತನನ್ನು ತಪಾಸಣೆ ನಡೆಸಿದ್ದಾಗ ಆತ ತನ್ನ ಒಳ ಉಡುಪಿನಲ್ಲಿ 103.33 ಗ್ರಾಂ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದುದು ಬೆಳಕಿಗೆ ಬಂದಿದೆ.