ದೇವನಹಳ್ಳಿ:ವಿದೇಶದಿಂದ ಅಕ್ರಮವಾಗಿ ಇ-ಸಿಗರೇಟ್ ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರು ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ 15.9 ಲಕ್ಷ ರೂಪಾಯಿ ಮೌಲ್ಯದ ಇ-ಸಿಗರೇಟ್ ವಶಕ್ಕೆ ಪಡೆಯಲಾಗಿದೆ.
ಸೋಮವಾರ ಮಲೇಷ್ಯಾದ ಕೌಲಾಲಂಪುರ್ನಿಂದ ಮಲೇಷ್ಯಾ ಏರ್‌ಲೈನ್ಸ್ ಎಮ್ ಹೆಚ್ 192 ವಿಮಾನದ ಮೂಲಕ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರ ಲಗೇಜ್ಗಳನ್ನು ಪರಿಶೀಲನೆ ಮಾಡುವಾಗ ಅಕ್ರಮ ಪತ್ತೆಯಾಗಿದೆ. 1,590 ಇ-ಸಿಗರೇಟ್ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ವಿರುದ್ಧ ಕಸ್ಟಮ್ಸ್ ಕಾಯಿದೆ 1962 ಅಡಿ ಪ್ರಕರಣ ದಾಖಲಿಸಲಾಗಿದೆ.
ಸೂಟ್ಕೇಸ್ನಲ್ಲಿ 20 ವಿಷಕಾರಿ ಕಿಂಗ್ ಕೋಬ್ರಾ!:ಬ್ಯಾಂಕಾಕ್ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನ ಲಗೇಜ್ಗಳನ್ನು ತಪಾಸಣೆ ಮಾಡಿದಾಗ ಆತನ ಸೂಟ್ ಕೇಸ್ನಲ್ಲಿ 20 ವಿಷಕಾರಿ ಕಿಂಗ್ ಕೋಬ್ರಾಗಳು ಪತ್ತೆಯಾಗಿದ್ದವು. ಹೆಬ್ಬಾವು, ಕೋತಿಗಳು ಸೇರಿದಂತೆ ಒಟ್ಟು 78 ಪ್ರಾಣಿಗಳಿದ್ದವು. ಸೆಪ್ಟೆಂಬರ್ 6 ರಂದು ರಾತ್ರಿ 10:30ಕ್ಕೆ ಏರ್ ಏಷ್ಯಾ ವಿಮಾನದಲ್ಲಿ ಬಂದ ಪ್ರಯಾಣಿಕನ ಲಗೇಜ್ಗಳನ್ನು ಪರಿಶೀಲನೆ ಮಾಡಿದಾಗ ಅಕ್ರಮ ಬಯಲಾಗಿತ್ತು.
ರಕ್ತಚಂದನ ಹರಾಜು:2012 ರಿಂದ 2022 ರವರೆಗೆ ನಗರದಿಂದ ವಿದೇಶಗಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದ ರಕ್ತಚಂದನವನ್ನು ಇತ್ತೀಚೆಗೆ ಹರಾಜು ಮಾಡಲಾಗಿತ್ತು. ಆನ್‌ಲೈನ್‌ನಲ್ಲಿ 3 ಪ್ರತಿಷ್ಠಿತ ಏಜೆನ್ಸಿಗಳು 28 ಕೋಟಿ ರೂ.ಗೆ ಬಿಡ್ ಮಾಡಿ ಖರೀದಿಸಿದ್ದವು. 56.2 ಮೆಟ್ರಿಕ್ ಟನ್ ರಕ್ತಚಂದನ ಹರಾಜು ಹಾಕಲಾಗಿತ್ತು.
ಮಂಗಳೂರು ಬಂದರಿನಿಂದ ಅಕ್ರಮವಾಗಿ ವಿದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ರಕ್ತಚಂದನ ಇದಾಗಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯ ಅರಣ್ಯ ಇಲಾಖೆಯು ಆನ್‌ಲೈನ್ ಮೂಲಕ ಹರಾಜು ನಡೆಸಿತ್ತು. ಒಟ್ಟು 2,094 ದಿಮ್ಮಿಗಳನ್ನೊಳಗೊಂಡ 56.2 ಮೆಟ್ರಿಕ್ ಟನ್ ರಕ್ತಚಂದನವನ್ನು ಏಜೆನ್ಸಿಗಳು ಹರಾಜಿನಲ್ಲಿ ಖರೀದಿಸಿದ್ದವು.
ಎ ಕೆಟಗರಿ 3 ಲಾಟ್, ಬಿ ಕೆಟಗರಿ 6 ಲಾಟ್, ಸಿ ಕೆಟಗರಿ 6 ಲಾಟ್, ಡಿ ಕೆಟಗರಿ 3 ಲಾಟ್‌ಗಳಾಗಿ ವಿಂಗಡಣೆ ಮಾಡಲಾಗಿತ್ತು. ಒಟ್ಟು 18 ಲಾಟ್‌ಗಳಲ್ಲಿ ನ್ಯಾಚುರಲ್ ಕನ್ನೊಜೆನ್ಸಿ ಏಜೆನ್ಸಿಯು 10 ಲಾಟ್‌ಗೆ 14.5 ಕೋಟಿ ರೂ. ಬಿಡ್ ಮಾಡಿದ್ದು, ಯಮಾ ರಿಬನ್ಸ್ ಏಜೆನ್ಸಿಯು 4.2 ಕೋಟಿ ರೂ. ಬಿಡ್ ಜೊತೆಗೆ 3 ಲಾಟ್‌ಗೆ 1.6 ಕೋಟಿ ರೂ. ನೀಡಿ ಅಕ್ಷಾ ಏಜೆನ್ಸಿ ಖರೀದಿಸಿತ್ತು. ಮೂರು ಬಿಡ್‌ಗಳ ತೆರಿಗೆ ಸೇರಿ ಒಟ್ಟು ಮೊತ್ತ 28 ಕೋಟಿ ರೂ. ಆಗಿದೆ. ರಕ್ತಚಂದನಕ್ಕೆ ಚೀನಾ, ದುಬೈ, ಜಪಾನ್ ಸೇರಿದಂತೆ ಇತರೆ ದೇಶಗಳಲ್ಲಿ ಬೇಡಿಕೆಯಿದ್ದು, ಖರೀದಿ ಮಾಡಿದ ಕಂಪನಿ ಅಲ್ಲಿಗೆ ಸಾಗಣೆ ಮಾಡಲಿದೆ.
ಇದನ್ನೂ ಓದಿ:ಬ್ಯಾಗ್ನಲ್ಲಿ ಹೆಬ್ಬಾವು, ಕಾಂಗರೂ ಸೇರಿ ಕಾಡು ಪ್ರಾಣಿಗಳ ಕಳ್ಳಸಾಗಣೆ: ಕಸ್ಟಮ್ಸ್ನಿಂದ 234 ವನ್ಯಜೀವಿಗಳ ರಕ್ಷಣೆ