ಬೆಂಗಳೂರು :ವಿದೇಶದಿಂದ ಅಕ್ರಮವಾಗಿ ಸಿಗರೇಟ್ ಸಾಗಿಸುವ ಯತ್ನವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭೇದಿಸಿದ್ದಾರೆ. ಈ ವೇಳೆ ಪ್ರಯಾಣಿಕರು ಸಿಕ್ಕಿಬಿದ್ದಿದ್ದು, ಅವರಿಂದ ವಶಪಡಿಸಿಕೊಂಡು 1.46 ಕೋಟಿ ಮೌಲ್ಯದ 7.3 ಲಕ್ಷ ಸಿಗರೇಟ್ಗಳನ್ನು ಸುಟ್ಟು ನಾಶ ಮಾಡಲಾಗಿದೆ. ನೆಲಮಂಗಲದ ಬೆಂಗಳೂರು ಇಕೋ ಪ್ರೈವೇಟ್ ಲಿಮಿಟೆಡ್ನಲ್ಲಿರುವ ಇನ್ಸಿನರೇಟರ್ನಲ್ಲಿ ಜಪ್ತಿ ಮಾಡಲಾದ ಸಿಗರೇಟ್ಗಳನ್ನು ಇಡೀ ದಿನ ನಾಶಪಡಿಸಲಾಗಿದೆ.
ಪಶ್ಚಿಮ ಏಷ್ಯಾ ಮತ್ತು ಥಾಯ್ಲೆಂಡ್ನಿಂದ ಪ್ರಯಾಣಿಕರು ಬೆಂಗಳೂರಿಗೆ ಅಕ್ರಮವಾಗಿ ಸಿಗರೇಟ್ ಸಾಗಿಸುವ ಯತ್ನದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿ ಬೀಳುತ್ತಿದ್ದರು. ಒಬ್ಬ ಪ್ರಯಾಣಿಕನಿಗೆ ವಿದೇಶದಿಂದ 100 ಸಿಗರೇಟ್ಗಳನ್ನು ತರಲು ಅನುಮತಿ ನೀಡಲಾಗಿದೆ. ಆದರೆ ಪ್ರಯಾಣಿಕರು 100ಕ್ಕಿಂತ ಹೆಚ್ಚು ಸಿಗರೇಟ್ಗಳನ್ನು ತಂದು ಕಸ್ಟಮ್ಸ್ ಆಕ್ಟ್ 1962ರ ಅಡಿ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ನಿಯಮಗಳನ್ನ ಮೀರಿ ಸಿಗರೇಟ್ಗಳನ್ನ ತರುವ ಪ್ರಯಾಣಿಕರಿಗೆ ಅನುಗುಣವಾಗಿ ದಂಡವನ್ನು ವಿಧಿಸಲಾಗುತ್ತದೆ. 50 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಸಿಗರೇಟ್ಗಳನ್ನ ತಂದವರನ್ನ ಬಂಧನಕ್ಕೆ ಒಳಪಡಿಸಲಾಗುತ್ತದೆ.
ಅಕ್ಟೋಬರ್ 2 ರಿಂದ 31ರ ವರೆಗೆ ಕಸ್ಟಮ್ಸ್ ಇಲಾಖೆಯು ನಡೆಸುತ್ತಿರುವ ಸ್ವಚ್ಛತಾ ಅಭಿಯಾನದ ಅಂಗವಾಗಿ ಸಿಗರೇಟ್ ಗಳನ್ನು ನಾಶಪಡಿಸಲಾಯಿತು. ಸಿಗರೇಟ್ಗಳ ನಾಶಪಡಿಸುವ ವೇಳೆ ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಏರ್ ಕಾರ್ಗೋ ಕಮಿಷನರೇಟ್‌ನ ಜಾಗೃತ ಘಟಕದ ಅಧಿಕಾರಿಗಳು ಉಪಸ್ಥಿತರಿದ್ದರು.