ಬೆಂಗಳೂರು : ಎಟಿಎಂಗೆ ತುಂಬಿಸಬೇಕಿದ್ದ ಹಣದ ಜೊತೆ ಕಸ್ಟೋಡಿಯನ್ ಕಂಪನಿ ನೌಕರ ಪರಾರಿಯಾಗಿರುವ ಘಟನೆ ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಜೇಶ್ ಮೆಸ್ತಾ 1 ಕೋಟಿ 3 ಲಕ್ಷದೊಂದಿಗೆ ನಾಪತ್ತೆಯಾದ ಆರೋಪ ಕೇಳಿ ಬಂದಿದ್ದು ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಟಿಎಂ ಯಂತ್ರಗಳಿಗೆ ಹಣ ತುಂಬಿಸುವ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ ಸಂಸ್ಥೆಯ ನೌಕರನಾಗಿದ್ದ ರಾಜೇಶ್ ಮೆಸ್ತಾ, ಕಳೆದ 11 ವರ್ಷಗಳಿಂದಲೂ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಆದರೆ ಜನವರಿ ಅಂತ್ಯದಲ್ಲಿ ಇದ್ದಕ್ಕಿದ್ದಂತೆ ಫೋನ್ ಸ್ವಿಚ್ ಆಫ್ ಮಾಡಿರುವ ರಾಜೇಶ್ ನಾಪತ್ತೆಯಾಗಿದ್ದ. ಅನುಮಾನಗೊಂಡ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಸಂಸ್ಥೆಯವರು ರಾಜೇಶ್ ಹಣ ತುಂಬಿಸುತ್ತಿದ್ದ ಎಟಿಎಂಗಳ ಆಡಿಟ್ ಮಾಡಿದಾಗ 1 ಕೋಟಿ 3 ಲಕ್ಷ ರೂಪಾಯಿ ಹಣದ ವ್ಯತ್ಯಾಸ ಕಂಡುಬಂದಿದೆ. ಸದ್ಯ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಕಂಪನಿಯವರು ನೀಡಿರುವ ದೂರಿನನ್ವಯ ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಟ್ಕಳದ ದೇವಾಲಯದಲ್ಲಿ ಕಳ್ಳತನ ಭಟ್ಕಳದ ದೇವಾಲಯದಲ್ಲಿ ಕಳ್ಳತನ:ತಾಲೂಕಿನ ಮುಟ್ಟಳಿ ಗ್ರಾಮ ಪಂಚಾಯತ್ ವ್ಯಾಪ್ತಿ ಎಕ್ಕೆಗೋಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಾಗಿಲ ಬೀಗ ಮುರಿದು ದೇವಸ್ಥಾನದಲ್ಲಿ ಇದ್ದ ವಸ್ತುಗಳನ್ನು ಕಳ್ಳತನ ಮಾಡಿ ಸಾಗಿಸುವಾಗ ಇಬ್ಬರು ಖತರ್ನಾಕ್ ಆರೋಪಿಗಳು ಸ್ಥಳೀಯ ಜನರ ಕೈಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಆರೋಪಿಗಳನ್ನು ಅನ್ನರಸಾಬ್ ಹಾಗೂ ಅನ್ನಾರ ಎಂದು ಗುರುತಿಸಲಾಗಿದೆ. ಈ ಇಬ್ಬರು ಶಿವಮೊಗ್ಗದ ಟಿಪ್ಪು ನಗರ ನಿವಾಸಿಗಳಾಗಿದ್ದು ಹಾಲಿ ಬೆಳಲ ಖಂಡದಲ್ಲಿ ವಾಸವಾಗಿದ್ದಾರೆ ಎಂದು ತಿಳಿದು ಬಂದಿದೆ. ನಶೆಯಲ್ಲಿದ್ದ ಈ ಇಬ್ಬರು ರಾತ್ರಿ ಸಮಯದಲ್ಲಿ ನಿರ್ಜನ ಪ್ರದೇಶದಲ್ಲಿ ಇರುವ ಮುಟ್ಟಳಿ ಮತ್ತು ತಲಾನ ಗ್ರಾಮದ ಜನರು ಪೂಜಿಸುವ ಶಕ್ತಿ ದೇವತೆ ಎಕ್ಕೆಗೋಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬೀಗವನ್ನು ಒಡೆದು ಒಳಗೆ ಹೋಗಿದ್ದಾರೆ. ಒಳ ಪ್ರವೇಶಿಸಿದ ನಂತರ ದೇವಸ್ಥಾನದ ಹುಂಡಿಗಳನ್ನು ಒಡೆದು ಅಂದಾಜು ಸುಮಾರು 5,000 ರಿಂದ 5500 ರೂ. ಹಣ ಮತ್ತು ದೇವಸ್ಥಾನದ ಗಂಟೆಗಳು, ಕಾಲುದೀಪ ಮತ್ತು ದೇವರ ಹರಿವಾಣ, ಇನ್ನಿತರ ವಸ್ತುಗಳನ್ನು ಕಳವು ಮಾಡಿ ಚೀಲಗಳಲ್ಲಿ ತುಂಬಿಕೊಂಡು ದೇವಸ್ಥಾನ ಪಕ್ಕದಲ್ಲಿ ಇದ್ದ ಮರದ ಕೆಳಗಡೆ ಅವಿತು ಕುಳಿತುಕೊಂಡಿದ್ದರಂತೆ.
ಆ ಸಂದರ್ಭದಲ್ಲಿ ಸ್ಥಳೀಯ ನಿವಾಸಿ ತಿಮ್ಮಪ್ಪ ನಾಯ್ಕ ಎನ್ನುವರು ತೋಟಕ್ಕೆ ನೀರು ಬಿಟ್ಟು ಅದೇ ದಾರಿಯಲ್ಲಿ ಮನೆಗೆ ಬೈಕ್ ಮೇಲೆ ಸಾಗುತ್ತಿದ್ದ ವೇಳೆ ಅನುಮಾನಗೊಂಡು ಗಾಡಿ ಹೆಡ್ ಲೈಟ್ ಅನ್ನು ಅವರ ಮುಖದ ಮೇಲೆ ಬಿಟ್ಟು ನೋಡಿದ್ದಾರೆ. ಆಗ ಪಕ್ಕದಲ್ಲಿ ಗೋಣಿ ಚೀಲ ಕಂಡಿದೆ. ಈ ಬಗ್ಗೆ ವಿಚಾರಿಸಿದಾಗ ಖದೀಮರು ತಿಮ್ಮಪ್ಪ ನಾಯ್ಕ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಆ ವೇಳೆ ತಿಮ್ಮಪ್ಪ ಅವರು ಖದೀಮರಿಂದ ತಪ್ಪಿಸಿಕೊಂಡು ಸ್ಥಳೀಯರಿಗೆ ಸುದ್ದಿ ತಿಳಿಸಿದ್ದಾರೆ.
ನಂತರ ಅಕ್ಕ ಪಕ್ಕದಲ್ಲಿದ್ದ ಮನೆಯವರು ಆಗಮಿಸಿ ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದಾಗ ಕಳ್ಳರು ತಾವು ತಂದಿದ್ದ ಬೈಕ್ ಸ್ಟಾರ್ಟ್ ಮಾಡಿ ಅವಸರದಲ್ಲಿ ಒಡಿ ಹೋಗುವಾಗ ಬೈಕ್ ನಿಯಂತ್ರಣ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಗ ಸಾರ್ವಜನಿಕರ ಕೈಗೆ ತಗಲಾಕಿಕೊಂಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಮೀಣ ಠಾಣೆ ಪೊಲೀಸರು ಕಳ್ಳತನ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸಂತೋಷ ಗೊಯ್ದಪ್ಪ ನಾಯ್ಕ ದೂರು ನೀಡಿದ್ದು, ಸಿ.ಪಿ.ಐ ಚಂದನ ಗೋಪಾಲ ಹಾಗೂ ಪಿ.ಎಸ್.ಐ ಶ್ರೀಧರ್ ನಾಯ್ಕ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನ ಮಹಿಳೆ ಕೊಳ್ಳೇಗಾಲದಲ್ಲಿ ಶವವಾಗಿ ಪತ್ತೆ: ಜಜ್ಜಿದ ಮೊಬೈಲ್ ಮೂಲಕ ಗುರುತು ಪತ್ತೆ