ಕರ್ನಾಟಕ

karnataka

ETV Bharat / state

ಉಚಿತ ವಿದ್ಯುತ್ ಗ್ಯಾರಂಟಿ ಮಧ್ಯೆ ಪ್ರಸಕ್ತ ಐದು ಎಸ್ಕಾಂಗಳ ಹಣಕಾಸು ಸ್ಥಿತಿಗತಿ ಹೇಗಿದೆ ನೋಡಿ! - ವಿದ್ಯುತ್​ ಸರಬರಾಜು ಕಂಪನಿ

ಕಾಂಗ್ರೆಸ್​ನ ಉಚಿತ ವಿದ್ಯುತ್​ ಗ್ಯಾರಂಟಿ ಈಗಾಗಲೇ ಸಾಲದಲ್ಲಿರುವ ವಿದ್ಯುತ್​ ಸರಬರಾಜು ಕಂಪನಿಗಳ ಮೇಲೆ ಇನ್ನಷ್ಟು ಸಾಲದ ಹೊರೆ ಹೊರಿಸುತ್ತಾ ಕಾದು ನೋಡಬೇಕಿದೆ.

Congress' free electricity guarantee
ಕಾಂಗ್ರೆಸ್​ನ ಉಚಿತ ವಿದ್ಯುತ್ ಗ್ಯಾರಂಟಿ

By

Published : May 18, 2023, 5:44 PM IST

ಬೆಂಗಳೂರು: ಕಾಂಗ್ರೆಸ್ ಸರ್ಕಾರ 200 ಯುನಿಟ್ ಉಚಿತ ವಿದ್ಯುತ್ ಗ್ಯಾರಂಟಿಯನ್ನು ತನ್ನ ಮೊದಲ ಸಂಪುಟ ಸಭೆಯಲ್ಲಿ ತೀರ್ಮಾನಿಸಲಿದೆ.‌ ಬಹುನಿರೀಕ್ಷಿತ ಉಚಿತ ವಿದ್ಯುತ್ ಭರವಸೆ ಜಾರಿಯಾಗುವ ಹಿನ್ನೆಲೆ ಸದ್ಯ ಐದೂ ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗಳ ಹಣಕಾಸು ಸ್ಥಿತಿಗತಿ ಹೇಗಿದೆ ಎಂಬ ವರದಿ ಇಲ್ಲಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶನಿವಾರ ಅಸ್ತಿತ್ವಕ್ಕೆ ಬರಲಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಕೆಲ ಸಚಿವರು ಪದಗ್ರಹಣ ಮಾಡಲಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಮುಂದಿರುವ ಸದ್ಯದ ದೊಡ್ಡ ಸವಾಲು ತಮ್ಮ ಐದು ಬೃಹತ್ ಗ್ಯಾರಂಟಿಗಳ ಅನುಷ್ಠಾನ. ಸಿದ್ದರಾಮಯ್ಯ ನೇತೃತ್ವದ ಮೊದಲ ಸಂಪುಟ ಸಭೆಯಲ್ಲೇ ಈ ಐದು ಗ್ಯಾರಂಟಿಗಳ ಜಾರಿ ಬಗ್ಗೆ ತೀರ್ಮಾನ ಕೈಗೊಳ್ತಾರಾ ಎಂಬುದು ಎಲ್ಲರ ಕುತೂಹಲ. ಅದರಲ್ಲೂ ಪ್ರಮುಖವಾಗಿ 200 ಯುನಿಟ್​ವರೆಗಿನ ಉಚಿತ ವಿದ್ಯುತ್ ಸಂಬಂಧ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಈಗಾಗಾಲೇ ರಾಜ್ಯದ ಜನರು ತಮ್ಮ ವಿದ್ಯುತ್ ಬಿಲ್ ಕಟ್ಟಲ್ಲ ಎಂದು ಎಸ್ಕಾಂಗಳ ಸಿಬ್ಬಂದಿ ಜೊತೆ ಜಟಾಪಟಿಗೆ ಇಳಿದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಸರ್ಕಾರ ತುರ್ತಾಗಿ ಈ ಗ್ಯಾರಂಟಿಯನ್ನು ಜಾರಿಗೊಳಿಸುವುದು ಅತ್ಯಗತ್ಯವಾಗಿದೆ. ಎಸ್ಕಾಂಗಳ ಹಣಕಾಸು ಪರಿಸ್ಥಿತಿಯನ್ನು ನೋಡಿದರೆ ಈ ಉಚಿತ ವಿದ್ಯುತ್ ಗ್ಯಾರಂಟಿ ಎಸ್ಕಾಂಗಳ ಪಾಲಿಗೆ ಹಣಕಾಸು ಶಾಕ್ ನೀಡುವುದರಲ್ಲಿ ಅನುಮಾನವೇ ಇಲ್ಲ.

ಎಸ್ಕಾಂಗಳ ಸಾಲದ ಸ್ಥಿತಿಗತಿ ಏನಿದೆ?: ರಾಜ್ಯದ ಐದು ಎಸ್ಕಾಂಗಳು ಸಾಲದ ಸುಳಿಯಲ್ಲಿ ಸಿಲುಕಿವೆ. ಆದಾಯ ಕೊರತೆಯನ್ನು ಸರಿದೂಗಿಸಲು ಕೋಟ್ಯಂತರ ರೂ. ಸಾಲ ಮಾಡುತ್ತಿದೆ. ಡಿಸೆಂಬರ್ 2022ರ ವರೆಗೆ ಐದು ಎಸ್ಕಾಂ ಹಾಗೂ ಕೆಪಿಟಿಸಿಎಲ್, ಕೆಪಿಸಿಎಲ್ ಸುಮಾರು 76,000 ಕೋಟಿ ರೂ.ಗೂ ಹೆಚ್ಚು ಸಾಲ ಮಾಡಿದೆ ಎಂದು ಇಂಧನ ಇಲಾಖೆ ಮಾಹಿತಿ ನೀಡಿದೆ.

ಇಲಾಖೆ ಮೂಲಗಳ ಪ್ರಕಾರ ರಾಜ್ಯದ ಎಲ್ಲಾ ಎಸ್ಕಾಂಗಳು ಸುಮಾರು 30,000 ಕೋಟಿ ರೂ. ಸಾಲದ ಸುಳಿಯಲ್ಲಿವೆ. ವಿದ್ಯುತ್ ಉತ್ಪಾದನಾ ನಿಗಮವಾದ ಕೆಪಿಸಿಎಲ್ 31,259 ಕೋಟಿ ರೂ. ಸಾಲದಲ್ಲಿ ಮುಳುಗಿದ್ದರೆ, ಇತ್ತ ಕೆಪಿಟಿಸಿಎಲ್ ಸುಮಾರು 10,302 ಕೋಟಿ ರೂ. ಸಾಲದ ಸುಳಿಯಲ್ಲಿದೆ.

ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 2013-2018 ವರೆಗೆ ಎಸ್ಕಾಂ ಹಾಗೂ ಕೆಪಿಸಿಎಲ್ ಮತ್ತು ಕೆಪಿಟಿಸಿಎಲ್ ಸುಮಾರು 33,414.20 ಕೋಟಿ ರೂ. ಸಾಲ ಮಾಡಿತ್ತು. ಮೈತ್ರಿ ಸರ್ಕಾರದ ವೇಳೆ ಎಸ್ಕಾಂಗಳು ಸಾಲದ ಮೊತ್ತ 27,178.88 ಕೋಟಿ ರೂ. ಆಗಿತ್ತು. ಬಿಜೆಪಿ ಸರ್ಕಾರದಲ್ಲಿ ಸುಮಾರು 56,300 ಕೋಟಿ ರೂ. ಸಾಲ ಮಾಡಲಾಗಿದೆ. ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ಎಸ್ಕಾಂಗಳು ಮಾಡಿದ ಸಾಲದ ಪೈಕಿ 23,988.44 ಕೋಟಿ ಸಾಲ ಮರುಪಾವತಿ ಮಾಡಲಾಗಿದೆ. ಅದೇ ಮೈತ್ರಿ ಸರ್ಕಾರದ ವೇಳೆ ಮಾಡಿದ ಸಾಲದ ಪೈಕಿ ಸುಮಾರು 17,550 ಕೋಟಿ ರೂ. ಮರುಪಾವತಿ ಮಾಡಲಾಗಿದೆ.

ಆದಾಯ ಕೊರತೆಯಲ್ಲಿ ಎಸ್ಕಾಂಗಳು: 2023-24 ಸಾಲಿನಲ್ಲಿ ಎಸ್ಕಾಂಗಳು 62,133.47 ಕೋಡಿ ರೂ. ನ ವಾರ್ಷಿಕ ಕಂದಾಯ ಅಗತ್ಯತೆ ಅಂದಾಜು ಮಾಡಿದೆ. ಈ ಪೈಕಿ 8,951.20 ಕೋಟಿ ಆದಾಯ ಕೊರತೆ ಹೊಂದಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಎಸ್ಕಾಂಗಳ ವಾರ್ಷಿಕ ಕಂದಾಯ ಅಗತ್ಯತೆಯನ್ನು 58,109.95 ಕೋಟಿ ರೂ.ಗೆ ಮಿತಗೊಳಿಸಿ ಅನುಮೋದನೆ ನೀಡಿದೆ. ಈ ಪೈಕಿ 4,4571.12 ಕೋಟಿ ರೂ.‌ ಆದಾಯ ಕೊರತೆ ಇರಲಿದೆ.

ಕಲ್ಲಿದ್ದಲಿನ ವೆಚ್ಚ ಹಾಗೂ ಅದರ ಸಾಗಣಿಕೆ ವೆಚ್ಚದ ಹಚ್ಚಳದಿಂದಾಗಿ, ಆರ್ಥಿಕ ವರ್ಷ 2022-23ರ ವಿದ್ಯುತ್‌ ಖರೀದಿ ವೆಚ್ಚಕ್ಕೆ ಹೋಲಿಸಿದರೆ ಆರ್ಥಿಕ ವರ್ಷ 2023-24 ರಲ್ಲಿ ವಿದ್ಯುತ್ ಖರೀದಿ ವೆಚ್ಚ ಶೇ 13 ರಷ್ಟು ಗಣನೀಯ ಹೆಚ್ಚಳವಾಗಿದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತ ನೌಕರರ ವೇತನ ಮತ್ತು ಭತ್ಯೆಯ ಶೇಕಡಾ 20 ರಷ್ಟು ಪರಿಷ್ಕರಣೆ, ಬಂಡವಾಳ ಹೂಡಿಕೆಯಲ್ಲಿ ಹೆಚ್ಚಳ ಮತ್ತು ಬ್ಯಾಂಕ್‌ಗಳ ಸಾಲದ ಮೇಲಿನ ಬಡ್ಡಿ ದರಗಳ ಹೆಚ್ಚಳದಿಂದಾಗಿ ಬಡ್ಡಿ ಮತ್ತು ಹಣಕಾಸು ಶುಲ್ಕಗಳಲ್ಲಿ ಶೇ 30 ರಷ್ಟು ಹೆಚ್ಚಳವಾಗಿದೆ.

ಇತ್ತ ವಾರ್ಷಿಕ ಕಂದಾಯ ಅಗತ್ಯತೆಯ (ARR) ಹೆಚ್ಚಳದಿಂದಾಗಿ ಆರ್ಥಿಕ ವರ್ಷ 2022-23ರಲ್ಲಿ ಪ್ರತಿ ಯುನಿಟ್‌ಗೆ ಸರಾಸರಿ ರೂ. 8.42 ವೆಚ್ಚ ಇತ್ತು. ಅದು ಆರ್ಥಿಕ ವರ್ಷ 2023-24 ಸಾಲಿನಲ್ಲಿ ಪ್ರತಿ ಯುನಿಟ್‌ಗೆ ರೂ. 9.12ಗೆ ಹೆಚ್ಚಳವಾಗಿದೆ. ಆಯೋಗ, ಅನುಮೋದಿತ ಕಂದಾಯ ಕೊರತೆ ಮೊತ್ತ ರೂ. 4,457.12 ಕೋಟಿಗಳನ್ನು ಸರಿದೂಗಿಸಲು, ಎಲ್ಲಾ ಎಲ್.ಟಿ ಮತ್ತು ಹೆಚ್.ಟಿ ಗ್ರಾಹಕರಿಗೆ ಪ್ರತಿ ಯುನಿಟ್​ಗೆ ಸರಾಸರಿ 70 ಪೈಸೆಯಷ್ಟು ದರ ಹೆಚ್ಚಳವನ್ನು ಮೊನ್ನೆ ಅನುಮೋದಿಸಿದೆ. ಇದರಿಂದಾಗಿ ಗ್ರಾಹಕರ ಬಿಲ್ಲುಗಳಲ್ಲಿ ಒಟ್ಟು ಶೇಕಡಾ 8.31 ರಷ್ಟು ಹೆಚ್ಚಳವಾಗಿದೆ.

ಎಸ್ಕಾಂಗಳ ಮೇಲೆ ಸಹಾಯಧನದ ಭಾರಿ ಹೊರೆ:ವಿವಿಧ ಯೋಜನೆಗಳಿಗೆ ಸರ್ಕಾರ ನೀಡುವ ಸಬ್ಸಿಡಿ ಹೊರೆ ಎಸ್ಕಾಂಗಳ ಮೇಲೆ ಬೆಟ್ಟದಷ್ಟಾಗಿದೆ. ಕೃಷಿ ಪಂಪ್ ಸೆಟ್, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆಗಳಿಗೆ ಲಕ್ಷಾಂತರ ಕೋಟಿ ಸಹಾಯಧನ ನೀಡಲಾಗುತ್ತಿದೆ. ರೈತರ ಐಪಿ ಸೆಟ್​ಗಳಿಗೆ ವಾರ್ಷಿಕ ಸುಮಾರು 12,000 ಕೋಟಿ ರೂ‌. ಸಬ್ಸಿಡಿ ಕೊಡಲಾಗುತ್ತಿದೆ. ಭಾಗ್ಯ ಜ್ಯೋತಿ, ಕುಟೀರ ಜ್ಯೋತಿಗೆ ವಾರ್ಷಿಕ 700 ಕೋಟಿ ರೂ. ಸಬ್ಸಿಡಿ ಹೊರೆ ಬೀಳುತ್ತಿದೆ.

ಇನ್ನು ಬೊಮ್ಮಾಯಿ‌ ನೇತೃತ್ವದ ಬಿಜೆಪಿ ಸರ್ಕಾರ ಕೊಡುತ್ತಿರುವ ಎಸ್​ಸಿ/ಎಸ್ಟಿ ಬಿಪಿಎಲ್​ದಾರರಿಗೆ 75 ಯುನಿಟ್​ವರೆಗಿನ ಉಚಿತ ವಿದ್ಯುತ್ ಯೋಜನೆಗೆ ವಾರ್ಷಿಕ 976 ಕೋಟಿ ರೂ‌.ನಷ್ಟು ಹೊರೆ ಬೀಳುತ್ತಿದೆ. ಅಂದರೆ ಈಗಾಗಲೇ ವಿವಿಧ ಉಚಿತ ವಿದ್ಯುತ್ ಯೋಜನೆಗಳಿಂದ ವಾರ್ಷಿಕ ಸುಮಾರು 13,000-14,000 ಕೋಟಿ ರೂ. ಸಹಾಯಧನದ ಹೊರೆ ಸರ್ಕಾರದ ಮೇಲೆ ಬೀಳುತ್ತಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಎಸ್ಕಾಂಗಳ ಪಾವತಿಸಬೇಕಾದ ಬಾಕಿ ಹಣ:ಎಸ್ಕಾಂಗಳು ಕೆಪಿಸಿಎಲ್​ಗೆ ಸುಮಾರು 10,000 ಕೋಟಿ ರೂ. ಬಾಕಿ ಬಿಲ್ ಉಳಿಸಿಕೊಂಡಿವೆ. ಇನ್ನು ಕೇಂದ್ರ ಗ್ರಿಡ್​ಗೆ ಎಸ್ಕಾಂಗಳು ಸುಮಾರು 1,500 ಕೋಟಿ ರೂ. ಬಾಕಿ ಬಿಲ್ ಹೊಂದಿವೆ. ಕೆಪಿಟಿಸಿಎಲ್​ಗೆ 2,000 ಕೋಟಿ ರೂ. ಪಾವತಿಸಬೇಕಾಗಿದೆ. 2023-24 ಸಾಲಿನಲ್ಲಿ ಸರ್ಕಾರ ಎಸ್ಕಾಂಗಳಿಗೆ ಸುಮಾರು 14,508 ಕೋಟಿ ರೂ. ಪಾವತಿಸಬೇಕಾಗಿದೆ. ಇತ್ತ ಆರ್​ಡಿಪಿಆರ್, ನಗರಾಭಿವೃದ್ಧಿ ಇಲಾಖೆ ಮತ್ತು ಇತರೆ ಸರ್ಕಾರಿ ಇಲಾಖೆಗಳು ವಿದ್ಯುತ್ ಬಿಲ್ ರೂಪದಲ್ಲಿ ಸುಮಾರು 8,800 ಕೋಟಿ ರೂ. ಎಸ್ಕಾಂಗಳಿಗೆ ಪಾವತಿಸಬೇಕಾಗಿದೆ.

ಗ್ಯಾರಂಟಿಯಿಂದ ವಿದ್ಯುತ್ ಬಿಲ್ ಹೆಚ್ಚುವ ಆತಂಕ: ಇತ್ತ ಸರ್ಕಾರ 200 ಯುನಿಟ್​ವರೆಗೆ ಉಚಿತ ವಿದ್ಯುತ್ ನೀಡುವುದರಿಂದ ಎಸ್ಕಾಂಗಳ ಆದಾಯ ಕೊರತೆ ಈ ಸಾಲಿನಿಂದ ದುಪ್ಪಟ್ಟಾಗಲಿದೆ ಎಂದು ಇಲಾಖೆ ಅಧಿಕಾರೊಯೊಬ್ಬರು ತಿಳಿಸಿದ್ದಾರೆ. ಸದ್ಯ ಐದು ಎಸ್ಕಾಂಗಳು 4,457.12 ಕೋಟಿ ರೂ. ಆದಾಯ ಕೊರತೆಯನ್ನು ತೋರಿಸಿವೆ. 2023-24 ಸಾಲಿನಲ್ಲಿ ಬೆಸ್ಕಾಂ ಒಟ್ಟು 28,872.87 ಕೋಟಿ ರೂ. ವಾರ್ಷಿಕ ಕಂದಾಯ ಅಗತ್ಯತೆ ಇದೆ ಎಂದು ತಿಳಿಸಿದೆ. ಇನ್ನು ಮೆಸ್ಕಾಂ 4,771.44 ಕೋಟಿ ರೂ., ಸೆಸ್ಕ್ 6,148.33 ಕೋಟಿ ರೂ., ಹೆಸ್ಕಾಂ 10,899.61 ಕೋಟಿ ರೂ., ಜೆಸ್ಕಾಂ 7,427.70 ಕೋಟಿ ರೂ. ವಾರ್ಷಿಕ ಕಂದಾಯ ಅಗತ್ಯತೆಯನ್ನು ತೋರಿಸಿದೆ. 2023-24 ಸಾಲಿನಲ್ಲಿ ಎಸ್ಕಾಂಗಳು ಅಂದಾಜು ಒಟ್ಟು 4,457.12 ಕೋಟಿ ರೂ. ಕಂದಾಯ ಕೊರತೆ ಎದುರಿಸಲಿವೆ.

ಉಚಿತ ವಿದ್ಯುತ್ ಗ್ಯಾರಂಟಿಯಿಂದ ಈ ಆದಾಯ ಕೊರತೆ ದುಪ್ಪಟ್ಟು ಆಗಲಿದೆ. ಈ ಹಿನ್ನೆಲೆ ಎಸ್ಕಾಂಗಳು ಮುಂದಿನ ವರ್ಷ ತಮ್ಮ ವಿದ್ಯುತ್ ದರ ಹೆಚ್ಚಳ ಪ್ರಸ್ತಾವನೆಯಲ್ಲಿ ಆದಾಯ ಕೊರತೆ ಗಣನೀಯ ವೃದ್ಧಿಯಾಗಿರುವುದನ್ನು ಉಲ್ಲೇಖಿಸಿ ಗ್ರಾಹಕರಿಗೆ ಹೆಚ್ಚಿನ ವಿದ್ಯುತ್ ದರ ಏರಿಕೆಯ ಬರೆ ಹಾಕುವ ಸಾಧ್ಯತೆ ಭೀತಿಯನ್ನು ಇಲಾಖೆ ನಿವೃತ್ತ ಅಧಿಕಾರಿಯೊಬ್ಬರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್​ ಗೆಲ್ಲಿಸಿದ ಗ್ಯಾರಂಟಿ ಕಾರ್ಡ್​.. ಹೊಸ ಸರ್ಕಾರಕ್ಕೆ ಉಚಿತ ಯೋಜನೆಗಳ ಜಾರಿಗೆ ಎದುರಾಗಲಿದೆ ಹತ್ತಾರು ಸವಾಲು

ABOUT THE AUTHOR

...view details